ʼಗ್ಯಾರಂಟಿʼ ನಿಮ್ಮ ಮನೆ ದುಡ್ಡಿನಿಂದ ಕೊಟ್ಟಿದ್ದೀರಾ?; ಬಣ್ಣ ಬಣ್ಣದ ಕೂಲಿಂಗ್ ಗ್ಲಾಸುಗಳನ್ನು ಹಾಕಿಕೊಂಡು ಪೋಸು ಕೊಡುವುದು ಬೇಡ: ಕುಮಾರಸ್ವಾಮಿ ವಾಗ್ದಾಳಿ
ʼʼಈ ಸರಕಾರದ ಲಂಚಾವತಾರಕ್ಕೆ ಅಂತಿಮ ತೆರೆ ಬೀಳುವ ದಿನ ದೂರವಿಲ್ಲʼʼ
ಬೆಂಗಳೂರು, ಆ.15 'ಪ್ರತಿದಿನ ನಾವು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದ್ದೀರಿ. ನೀವೇನು ಕಾಂಗ್ರೆಸ್ ಕಚೇರಿಯಿಂದ, ನಿಮ್ಮ ಮನೆ ದುಡ್ಡಿನಿಂದ ಕೊಟ್ಟಿದ್ದೀರಾ? ಅದಕ್ಕೆ ಪ್ರತಿದಿನ ಜಾಹೀರಾತು, ಬಣ್ಣಬಣ್ಣದ ಕೂಲಿಂಗ್ ಗ್ಲಾಸುಗಳನ್ನು ಹಾಕಿಕೊಂಡು ಪೋಸು ಕೊಡುವುದು ಬೇರೆ?' ಎಂದು ರಾಜ್ಯ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ 77ನೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನಿಮ್ಮನ್ನು ಜನ ಯಾಕೆ ಮನೆಗೆ ಕಳಿಸಿದ್ದರು? ನಿಮ್ಮ ಪಾಪದ ಕೊಡ ತುಂಬಿದೆ ಅಂತಲೇ ಕಳಿಸಿದ್ದರು. ಈಗಲೂ ಅಷ್ಟೇ, ಮೂರೇ ತಿಂಗಳಿಗೆ ನಿಮ್ಮ ಬಣ್ಣ ಬಯಲಾಗಿದೆ ಎಂದು ಛೇಡಿಸಿದರು.
ʼʼಬಿಜೆಪಿಗೆ ನಾನೇನು ಅಡಿಯಾಳಲ್ಲ. ಬಿಜೆಪಿ ಪರ ವಕ್ತಾರಿಕೆ ಮಾಡುವುದಕ್ಕೆ ಅಥವಾ ಅವರ ಪರವಾಗಿ ಮಾತನಾಡುವುದಕ್ಕೆ ನಾನೇನು ಅವರ ಅಡಿಯಾಳಲ್ಲ. ವಿರೋಧ ಪಕ್ಷದ ಸಾಮಾನ್ಯ ಶಾಸಕನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಲಂಚಾವತಾರದ ನಾಟಕಗಳ ಒಂದೊಂದೆ ಅಂಕ ತೆರೆದುಕೊಳ್ಳುತ್ತಿದೆ. ಸೀಸನ್ 1, ಸೀಸನ್ 2 ಎನ್ನುವ ರೀತಿಯಲ್ಲಿ ಎಲ್ಲವೂ ಬಯಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿವೆ. ಚಾಪ್ಟರ್ 1, ಚಾಪ್ಟರ್ 2 ಎಂದೆಲ್ಲಾ ಬರುತ್ತಿವೆ. ಅದೇ ರೀತಿ ಈ ಸರಕಾರದ ಭ್ರಚ್ಟಾಚಾರದ ಹಗರಣಗಳು ಹೊರಗೆ ಬರುತ್ತಿವೆ ಎಂದರು.
ಸಿನೆಮಾ ಎಂದ ಮೇಲೆ ಕೊನೆ ಎಂಬುದು ಇರಲೇಬೇಕು, ನಾಟಕ ಎಂದರೆ ಅದಕ್ಕೆ ಅಂತಿಮ ತೆರೆ ಎಳೆಯಲೇಬೇಕು. ಈ ಸರಕಾರದ ಲಂಚಾವತಾರಕ್ಕೂ ಅಂತಿಮ ತೆರೆ ಬೀಳುವ ದಿನ ದೂರವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನನಗೆ ಬುದ್ಧಿಭ್ರಮಣೆ ಆಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ನನ್ನ ಬಗ್ಗೆ ಅವರು ಚಿಂತಿಸುವುದು ಬೇಡ. ನಮ್ಮ ಕುಟುಂಬದಲ್ಲೆ ಸಾಕಷ್ಟು ಜನ ವೈದ್ಯರಿದ್ದಾರೆ. ಇನ್ನೊಬ್ಬರಿಂದ ನಾನು ಸರ್ಟಿಫಿಕೇಟ್ ತಗೆದುಕೊಳ್ಳಬೇಕಾಗಿಲ್ಲ. ನನಗೆ ಬುದ್ಧಿಭ್ರಮಣೆ ಆಗಿದ್ದರೆ ನಾನು ತಪಾಸಣೆ ಮಾಡಿಸಿಕೊಳ್ಳುತ್ತೇನೆ. ಆದರೆ, ಮತದಾರರ ಬುದ್ಧಿಗೆ ಮಣ್ಣೆರಚುವ ರೀತಿಯಲ್ಲಿ ಇವರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಅವರು ಕಿಡಿಗಾರಿದರು.
ನಾನು ಹಿಟ್ ಅಂಡ್ ರನ್ ಅಲ್ಲ: ಕುಮಾರಸ್ವಾಮಿ ಅವರದ್ದು ಹಿಟ್ ಅಂಡ್ ರನ್ ಎಂದಿರುವ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಅವರು, ನಾನು ಹಿಟ್ ಅಂಡ್ ರನ್ ಅಲ್ಲ. ನಮ್ಮ ಬಳಿ ಇರುವುದು ಖಾಲಿ ಪೆನ್ ಡ್ರೈವ್ ಅಲ್ಲ. ನಾವು ಕೊಡುವ ದಾಖಲೆಗಳನ್ನು ಇವರು ಪ್ರಾಮಾಣಿಕವಾಗಿ ತನಿಖೆ ಮಾಡಿಸುತ್ತಾರಾ? ಸಚಿವರ ವಿರುದ್ಧ ರಾಜ್ಯಪಾಲರಿಗೆ ಬರೆದ ಪತ್ರದ ಬಗ್ಗೆ ತನಿಖೆಗೆ ಮೊದಲೆ ನಕಲಿ ಪತ್ರ ಎಂದರನ್ನು ಹೇಗೆ ನಂಬುವುದು? ಎಂದರು.
ಕಾವೇರಿ ಬಗ್ಗೆ ಕಾದು ನೋಡೋಣ: ಕಾವೇರಿ ತಗಾದೆಯ ಬಗ್ಗೆ ತಮಿಳುನಾಡು ಸರಕಾರ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡೋಣ. ಮೇಕೆದಾಟಿನಿಂದ ಪಾದಯಾತ್ರೆ ಮಾಡಿದವರು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ, ಪಕ್ಷದ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಪಕ್ಷದ ಹಿರಿಯ ನಾಯಕರಾದ ನಾರಾಯಣ ರಾವ್, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ ಉಪಸ್ಥಿತರಿದ್ದರು.