ʼಆರೆಸ್ಸೆಸ್ಸನ್ನು ಕೀಳಾಗಿ ಟೀಕಿಸಿದ್ದವರ ಜತೆ ಹೆಜ್ಜೆ ಹಾಕುವುದಕ್ಕೆ ಆತ್ಮಸಾಕ್ಷಿ ಚುಚ್ಚಲಿಲ್ಲವೇ?’
ಬಿಜೆಪಿ ಶಾಸಕ ಸುರೇಶ್ ಕುಮಾರ್ಗೆ ಚಿಂತಕ ದಿನೇಶ್ ಅಮೀನ್ ಮಟ್ಟು ಪ್ರಶ್ನೆ
ದಿನೇಶ್ ಅಮೀನ್ ಮಟ್ಟು/ ಸುರೇಶ್ ಕುಮಾರ್
ಬೆಂಗಳೂರು : ‘ಮಾತೃ ಸ್ವರೂಪಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ವನ್ನು ಕೀಳಾಗಿ ಟೀಕಿಸಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಇದೀಗ ಹೆಜ್ಜೆ ಹಾಕುವುದಕ್ಕೆ ಆತ್ಮಸಾಕ್ಷಿ ಚುಚ್ಚಲಿಲ್ಲವೇ?’ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಅವರನ್ನು ಚಿಂತಕ ದಿನೇಶ್ ಅಮೀನ್ ಮಟ್ಟು ಪ್ರಶ್ನೆ ಮಾಡಿದ್ದಾರೆ.
ಸೋಮವಾರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ತನಗೆ ಮಾತೃ ಸ್ವರೂಪಿಯಾಗಿರುವ ಆರೆಸ್ಸೆಸ್ ಸಂಘಟನೆಯನ್ನು ಅಷ್ಟೊಂದು ಕೀಳಾಗಿ ನಿಂದಿಸಿದ್ದ ಕುಮಾರಸ್ವಾಮಿ ಜೊತೆಯಲ್ಲಿ ಹೆಜ್ಜೆಹಾಕುವುದೆಂದರೆ ತನ್ನ ತಾಯಿಯನ್ನು ನಿಂದಿಸಿದವರ ಜೊತೆ ಹೆಜ್ಜೆಹಾಕುವುದು ಎಂದು ಆತ್ಮಸಾಕ್ಷಿ ಚುಚ್ಚಲಿಲ್ಲವೇ. ಇಂತಹವರಿಗೆ ಆತ್ಮ ಎಲ್ಲಿಯದು ಎನ್ನುತ್ತೀರಾ? ಎಂದು ಕೇಳಿದ್ದಾರೆ.
‘2011ರಲ್ಲಿ ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ ಅವರು, ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದನ್ನು ಉದಹರಿಸಿ, ಈಗಿನ ರಾಜ್ಯಪಾಲರು ಇದೇ ಮೇಲ್ಮಂಕ್ತಿಯನ್ನು ಅನುಸರಿಸಬಹುದೆಂಬ ಸಲಹೆ ರೂಪದ ಫೋಸ್ಟ್ ಅನ್ನು ‘ಸಜ್ಜನ’ರೆಂಬ ಸ್ವಯಂಬಿರುದಾಂಕಿತ ಸುರೇಶ್ ಕುಮಾರ್ ಸಂಭ್ರಮಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
‘ತಮ್ಮ ಗೋವಿನ ಮುಖವನ್ನಷ್ಟೇ ಆಗಾಗ ತೋರಿಸುತ್ತಾ ಅದರ ಹಿಂದಿರುವ ವ್ಯಾಘ್ರದ ಹುನ್ನಾರ-ಕ್ರೌರ್ಯಗಳನ್ನು ಬಚ್ಚಿಡುವ ಕೆಲಸವನ್ನು ಇದರಲ್ಲಿಯೂ ಮಾಡಿದ್ದಾರೆ. ಆದರೆ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಪಾಪದ ಕೊಡ 2011ರ ಹೊತ್ತಿಗೆ ತುಂಬಿ ತುಳುಕಾಡುತ್ತಿತ್ತು ಎನ್ನುವುದು ಆ ಎಲ್ಲ ಹಗರಣಗಳು ನಡೆಯುತ್ತಿದ್ದಾಗ ಕಾನೂನು ಸಚಿವರಾಗಿದ್ದ ಸುರೇಶ್ ಕುಮಾರ್ಗೆ ಚೆನ್ನಾಗಿ ಗೊತ್ತು. ಆಗ ಕಣ್ಣು, ಕಿವಿ.ಬಾಯಿ ಮುಚ್ಚಿಕೊಂಡು ಕೂತಿದ್ದ ಸುರೇಶ್ ಕುಮಾರ್ ಅವರಿಗೆ ನೆನಪಿಲ್ಲ ಎಂದಾದರೆ ನೆನಪಿಸುವ ಬಯಸುವೆ ಎಂದೂ ಉಲ್ಲೇಖಿಸಿದ್ದಾರೆ.
ಹಂಸರಾಜ ಭಾರದ್ವಾಜ ಅವರು ಯಡಿಯೂರಪ್ಪನವರ ಪ್ರಾಸಿಕ್ಯೂಷನ್ ಗೆ ಅವಕಾಶ ಕೊಡುವಾಗ ಅಕ್ರಮ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಗಳ ಹದಿನೈದು ಪ್ರಕರಣಗಳನ್ನು ಪಟ್ಟಿ ಮಾಡಿ ಉಲ್ಲೇಖಿಸಿದ್ದರು.ಜತೆಗೆ, ನ್ಯಾಯವಾದಿಗಳಾದ ಬಾಲರಾಜ್, ಸಿರಾಝೀನ್ ಬಾಷ 1,300 ಪುಟಗಳ ದಾಖಲೆಗಳನ್ನು ನೀಡಿದ್ದರು. ಆಗ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರು ಯಡಿಯೂರಪ್ಪ ಸರಕಾರದ ಭ್ರಷ್ಟಾಚಾರ ಹಗರಣಗಳನ್ನು ಪ್ರತಿದಿನ ಬಯಲುಗೊಳಿಸುತ್ತಿದ್ದರು. ಕೊನೆಗೆ ಗಣಿ ಹಗರಣದ ತನಿಖೆಗೆ ಹೆಜ್ಜೆಹೆಜ್ಜೆಗೂ ಅಡೆತಡೆ ಒಡ್ಡುತ್ತಿದ್ದ ಸರಕಾರದ ಕುಟಿಲ ಕಾರಸ್ತಾನಗಳನ್ನು ಪ್ರತಿಭಟಿಸಿ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತಕ್ಕೆ ರಾಜೀನಾಮೆ ಸಲ್ಲಿಸಿದ್ದರು ಎಂದು ತಿಳಿಸಿದ್ದಾರೆ.
ಹೀಗೆ, ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಆಗಿನ ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರು ತಮ್ಮ ವಿವೇಚನಾಧಿಕಾರವನ್ನು ಬಳಸಿ ಯಡಿಯೂರಪ್ಪ ಅವರಿಗೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರು. ಜತೆಗೆ, ಯಡಿಯೂರಪ್ಪ ತಾವು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ಕಾನೂನು ಉಲ್ಲಂಘಿಸಿದ ನಿರ್ಧಾರಗಳಿಗೆ ತಾವೇ ಸಹಿ ಹಾಕಿದ್ದರು.ಚೆಕ್ಗಳಲ್ಲಿಯೇ ಹಣ ಸ್ವೀಕರಿಸಿದ್ದರು ಎಂಬ ಆರೋಪಗಳನ್ನು ಎದುರಿಸಿದ್ದರು. ಅಂತಹ ಯಾವುದಾದರೂ ಒಂದು ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಮುಡಾದಲ್ಲಿ ಆಗಿರುವ ಹಗರಣಗಳನ್ನು ಯಾರೂ ನಿರಾಕರಿಸುವುದಿಲ್ಲ. ಸೂಕ್ಷ್ಮವಾಗಿ ನೋಡಿದರೆ ಮುಡಾದಿಂದ ನೂರಾರು ನಿವೇಶನದಾರರಂತೆ ಮುಖ್ಯಮಂತ್ರಿಗಳ ಪತ್ನಿಗೂ ಅನ್ಯಾಯವಾಗಿದೆ ಎನ್ನುವುದನ್ನು ದಾಖಲೆಗಳು ಹೇಳುತ್ತವೆ. ಹೀಗಿದ್ದಾಗ ರಾಜ್ಯ ಇಲ್ಲವೇ ದೇಶದಲ್ಲಿ ನಡೆದ ಭ್ರಷ್ಟಾಚಾರದ ಹಗರಣಗಳಿಗೆ ಆ ಕಾಲದಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗಳನ್ನು ಹೊಣೆಗಾರರನ್ನಾಗಿ ಮಾಡುವುದಾದರೆ ಮೊದಲು ನೀಟ್ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ತನಿಖೆ ನಡೆಯಬೇಕಲ್ಲ? ಎಂದು ಅವರು ಕೇಳಿದ್ದಾರೆ.
ಇಂತಹ ಪ್ರಶ್ನೆಗಳಿಗೆ ಸುರೇಶ್ ಕುಮಾರ್ ಉತ್ತರಿಸುವುದಿಲ್ಲ ಎಂದು ನನಗೆ ಗೊತ್ತು. ಈ ವ್ಯಕ್ತಿಯ ಸೋಗಲಾಡಿತನಗಳ ಪರಿಚಯ ಈಗ ಎಲ್ಲರಿಗೂ ಆಗಿದೆ. ಅವರಿಗೆ ಅನುಕೂಲವಾಗುವುದಾದರೆ ಎಂತಹ ಭ್ರಷ್ಟರ ಜೊತೆ ಕೈಜೋಡಿಸಲು ಹೇಸುವುದಿಲ್ಲ. ಆ ರಾಜಕೀಯ ಅನಿವಾರ್ಯತೆಯನ್ನೂ ಕ್ಷಮಿಸಿಬಿಡಬಹುದು. ಆದರೆ ಇಷ್ಟೆಲ್ಲ ನಡೆಸಿದ ನಂತರ ತಾನು ಸಿಟಿ ರವಿ, ಅಶೋಕ್ ಅವರಂತಲ್ಲ, ತಾನು ಮಹಾ ಸಂಭಾವಿತ ಎಂಬ ಪೋಸು ಕೊಡುವುದಿದೆಯಲ್ಲ ಅದು ತಪ್ಪು ಎಂದು ಅಮೀನ್ ಮಟ್ಟು ಉಲ್ಲೇಖಿಸಿದ್ದಾರೆ.