‘ಗ್ಯಾರಂಟಿ’ ಯೋಜನೆಗಳ ಕುರಿತು ನಾಯಕರ ವ್ಯತಿರಿಕ್ತ ಹೇಳಿಕೆಗೆ ಕಡಿವಾಣ ಹಾಕಲು ಸಿಎಂಗೆ ದಿನೇಶ್ ಗೂಳಿಗೌಡ ಮನವಿ
ದಿನೇಶ್ ಗೂಳಿಗೌಡ
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಕುರಿತು ಕೆಲವು ನಾಯಕರು, ಶಾಸಕರು, ಸಚಿವರು ನೀಡುತ್ತಿರುವ ವ್ಯತಿರಿಕ್ತ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಪತ್ರ ನೀಡಿದ್ದಾರೆ.
ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೇ ಮಾದರಿಯಾದ ಕ್ರಾಂತಿಕಾರಿ ಯೋಜನೆಯಾಗಿದೆ. ಆದರೆ, ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕರ್ನಾಟಕದಲ್ಲಿ ಉಂಟಾದ ಅಲ್ಪ ಹಿನ್ನಡೆಯಿಂದ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು, ಸಚಿವರು, ಮುಖಂಡರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂಬ ಹೇಳಿಕೆಗಳನ್ನು ಬಹಿರಂಗವಾಗಿ ನೀಡುತ್ತಿದ್ದು ಇಂತಹ ಹೇಳಿಕೆಗಳನ್ನು ಯಾರೂ ಕೊಡದಂತೆ ಕಠಿಣ ಸೂಚನೆಯನ್ನು ಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಕಳೆದ ವಿಧಾನಸಭೆ ಹಾಗೂ ಈಗಿನ ಲೋಕಸಭಾ ಚುನಾವಣೆಗಳಲ್ಲಿ ಪಡೆದ ಮತಗಳಿಕೆ ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ 9 ಕ್ಷೇತ್ರಗಳನ್ನು ಗೆದ್ದರೂ ಮತಗಳಿಕೆಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣಲಾಗಿದೆ ಎಂದು ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.
ಈ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಮತಗಳಿಕೆಯಲ್ಲಿ ಶೇ.14ರಷ್ಟು ಹೆಚ್ಚಳ ಕಂಡಿದೆ. ಅಂದರೆ, 2019ರಲ್ಲಿ ಶೇಕಡಾ 31.5ರಷ್ಟಿದ್ದ ಮತ ಪ್ರಮಾಣವು ಈ ಬಾರಿ 45.5ಕ್ಕೆ ಏರಿಕೆಯಾಗಿದೆ. ಅದೇ ಶೇಕಡಾ 51.5ರಷ್ಟಿದ್ದ ಬಿಜೆಪಿ ಮತ ಗಳಿಕೆಯು ಈ ಬಾರಿ ಶೇ.46ಕ್ಕೆ ಕುಸಿತ ಕಂಡಿದೆ ಎಂದು ಮನವಿಯಲ್ಲಿ ದಿನೇಶ್ ಗೂಳಿಗೌಡ ಉಲ್ಲೇಖಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ನಾಯಕಿ ಪ್ರಿಯಾಂಕಾ ಗಾಂಧಿ ಅವರುಗಳು ರಾಜ್ಯಕ್ಕೆ ಬಂದು ಚಾಲನೆ ನೀಡಿದ್ದರು. ಯೋಜನೆಗಳನ್ನು ಶ್ಲಾಘಿಸಿದ್ದರು. ಈ ಯೋಜನೆ ನಿರಂತರವಾಗಿ ಜಾರಿಯಾಗುತ್ತದೆ ಎಂದು ವಾಗ್ದಾನ ನೀಡಿದ್ದರು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಣಯದಿಂದ ಜಾರಿಯಾದ ಯೋಜನೆಯನ್ನು ಬಂದ್ ಮಾಡುವಂತೆ ಹೇಳುವ ಅಧಿಕಾರ ಯಾರಿಗೂ ಇಲ್ಲ. ಬಡವರ ಪರವಾದ ಯೋಜನೆಗಳನ್ನು ಬಂದ್ ಮಾಡುವುದಿರಲಿ ಅಂಥ ಹೇಳಿಕೆಗಳಿಂದಲೂ ಪಕ್ಷದ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ. ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಅಂಥ ಹೇಳಿಕೆಗಳಿಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.