ಸುರಕ್ಷಿತವಲ್ಲದ ಔಷಧಗಳ ನಿರ್ಬಂಧಿಸುವಂತೆ ಕೇಂದ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಪತ್ರ

ದಿನೇಶ್ ಗುಂಡೂರಾವ್
ಬೆಂಗಳೂರು : ಗುಣಮಟ್ಟದ ಪರೀಕ್ಷೆಯಲ್ಲಿ ಸುರಕ್ಷಿತವಲ್ಲ ಎಂದು ಕಂಡುಬಂದ 9 ಔಷಧ ಕಂಪನಿಗಳ ಔಷಧ ಮಾರಾಟವನ್ನು ದೇಶಾದ್ಯಂತ ನಿರ್ಬಂಧಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಶುಕ್ರವಾರ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರಕಾರ ಸೆಂಟ್ರಲ್ ಡ್ರಗ್ಸ್ ಸ್ಯ್ಟಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಪ್ರಯೋಗಾಲಯದಲ್ಲಿ 9 ಔಷಧ ಕಂಪನಿಗಳು ಉತ್ಪಾದಿಸುವ ಡ್ರಗ್ಗಳನ್ನು ಪರೀಕ್ಷೆಗೆ ಒಳಪಡಿಸಿ ವರದಿ ಪಡೆಯಬೇಕು. ಅಲ್ಲಿಯವರೆಗೆ ದೇಶಾದ್ಯಂತ ಆ ಔಷಧ ಮಾರಾಟವನ್ನು ನಿರ್ಬಂಧಿಸಬೇಕು ಎಂದಿದ್ದಾರೆ.
ರಾಜ್ಯ ಸರಕಾರವು ಜ.1ರಿಂದ ಫೆ.16ರ ವರೆಗೆ 9 ಕಂಪೆನಿಗಳು ಉತ್ಪಾದಿಸುವ ಡ್ರಗ್ಸ್ ಬಗ್ಗೆ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷೆಯ ಫಲಿತಾಂಶದಲ್ಲಿ ಔಷಧಿಗಳು ಬಳಕೆಗೆ ಯೋಗ್ಯವಲ್ಲ ಎಂದು ಕಂಡುಬಂದಿದೆ. ಪರೀಕ್ಷೆಯಲ್ಲಿ ಆ ಕಂಪನಿಗಳ ಉತ್ಪಾದನೆಯ ಡ್ರಗ್ ಇರುವ ಇಂಜೆಕ್ಷನ್ ಔಷಧ ಗುಣಮಟ್ಟದ್ದಲ್ಲವೆಂದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ದೇಶದ ಎಲ್ಲ ರಾಜ್ಯಗಳ ಮಾರುಕಟ್ಟೆಯಲ್ಲಿರುವ ಔಷಧಗಳನ್ನು ಮಾರಾಟ ಮಾಡಲು ಅವಕಾಶ ನೀಡದೇ, ಅವುಗಳನ್ನು ವಾಪಸ್ ಪಡೆಯಲು ಕ್ರಮ ತೆಗೆದುಕೊಳ್ಳಬೇಕು. 9 ಔಷಧ ಕಂಪನಿಗಳ ಔಷಧಿಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುವುದನ್ನು ತಡೆಯುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಈ ಹಿಂದೆ ಪಶ್ಚಿಮ ಬಂಗಾಳ ಮೂಲದ ಪಶ್ಚಿಮ ಬಾಂಗಾ ಫಾರ್ಮಾಸಿಟಿಕಲ್ಸ್ ತಯಾರಿಸಿದ ಇಂಜೆಕ್ಷನ್ ನೀಡಿದ ಪರಿಣಾಮ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಐವರು ಗರ್ಭಿಣಿಯರು ಮೃತಪಟ್ಟಿದ್ದರು ಎಂಬ ವಿಷಯವನ್ನು ಪತ್ರದಲ್ಲಿ ಸಚಿವ ಗುಂಡೂರಾವ್ ಪ್ರಸ್ತಾಪಿಸಿದ್ದಾರೆ.