ಹಾವು ಕಡಿತದಿಂದ ಉಂಟಾಗುವ ಸಾವುಗಳ ಸಂಖ್ಯೆ ಅರ್ಧದಷ್ಟು ಕಡಿಮೆ ಮಾಡಲು ಕ್ರಮ : ದಿನೇಶ್ ಗುಂಡೂರಾವ್
Photo : x/@dineshgrao
ಬೆಂಗಳೂರು : ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು(ಎಸ್ಬಿಪಿಸಿ) ಅನುಷ್ಠಾನ ಮಾಡಲಾಗಿದ್ದು, 2030ರ ವೇಳೆಗೆ ಹಾವು ಕಡಿತದಿಂದ ಉಂಟಾಗುವ ಸಾವುಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಕ್ರಮ ವಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿರ್ವಹಣೆಗಾಗಿ ರಾಜ್ಯ ಕ್ರಿಯಾ ಯೋಜನೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕರ್ನಾಟಕದಲ್ಲಿ 2024ರಲ್ಲಿ 36 ಸಾವುಗಳು ಹಾವು ಕಡಿತದಿಂದ ಸಂಭವಿಸಿದ್ದು, ಹಾವು ಕಡಿತದ ಪ್ರಕರಣಗಳು ಮತ್ತು ಸಾವುಗಳನ್ನು ‘ಅಧಿಸೂಚಿತ ರೋಗಗಳು’ ಎಂದು ಘೋಷಿಸಲಾಗಿದೆ. ಎಲ್ಲ ಸರಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳಿಂದ ವರದಿಯಾಗುವ ಹಾವು ಕಡಿತದ ಪ್ರಕರಣಗಳನ್ನು ಇಂಟೆಗ್ರೇಟೆಡ್ ಹೆಲ್ತ್ ಇನ್ಫರ್ಮೇಷನ್ ಪ್ಲ್ಯಾಟ್ ಫಾರ್ಮ್ನಲ್ಲಿ ವರದಿ ಸಲ್ಲಿಸಲು ಕಡ್ಡಾಯಗೊಳಿಸಲಾಗಿದೆ" ಎಂದರು.
ಎಲ್ಲ ಜಿಲ್ಲಾ, ತಾಲೂಕು ಆಸ್ಪತ್ರೆಗಳು ಮತ್ತು ಕೆಲ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳು ಎಂದು ಗುರುತಿಸಲಾಗಿದೆ. ಆಶಾ ಕಾರ್ಯಕರ್ತೆಯರಿಂದ ಆರಂಭಿಸಿ ವೈದ್ಯಕೀಯ ಅಧಿಕಾರಿಗಳವರೆಗೆ ವಿವಿಧ ಹಂತಗಳಲ್ಲಿ ಹಾವು ಕಡಿತದ ಪ್ರಕರಣಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ವಿವರಿಸುವ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಆಂಟಿ ಸ್ನೇಕ್ ವೆನಮ್ ಅನ್ನು ಅಗತ್ಯ ಔಷಧ ಪಟ್ಟಿಯ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ತ್ವರಿತ ಚಿಕಿತ್ಸೆಗಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೊಳಗೊಂಡಂತೆ ಸರಕಾರಿ ಆರೋಗ್ಯ ಸೌಲಭ್ಯಗಳಲ್ಲಿ ಔಷಧಿಯನ್ನು ಲಭ್ಯವಾಗುವಂತೆ ಮಾಡಲಾಗಿದೆ. 24/7 ಆಂಬ್ಯುಲೆನ್ಸ್ ಸೇವೆಗಳು ಲಭ್ಯವಿದ್ದು, ಹಾವು ಕಡಿತದ ಸಂದರ್ಭದಲ್ಲಿ ತಕ್ಷಣದ ನೆರವಿಗಾಗಿ 108 ಗೆ ಕರೆಮಾಡಿ ಆಂಬುಲೆನ್ಸ್ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂದು ಅವರು ವಿವರಿಸಿದರು.
ಹಾವು ಕಡಿತದಿಂದ ಮರಣ ಹೊಂದವರ ಡೆತ್ ಆಡಿಟ್ ಅನ್ನು ಗೊತ್ತುಪಡಿಸಿದ ತಂಡದಿಂದ ನಡೆಸಲಾಗುತ್ತಿದೆ. ಹಾವು ಕಡಿತದ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ, ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತಿಗಳನ್ನು ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.