ಬಿಜೆಪಿ-ಜೆಡಿಎಸ್ ಪಕ್ಷಗಳ ಮೈಸೂರು ಪಾದಯಾತ್ರೆ ಈ ಶತಮಾನದ ಅತಿ ದೊಡ್ಡ ಜೋಕ್ : ದಿನೇಶ್ ಗುಂಡೂರಾವ್ ವ್ಯಂಗ್ಯ
ದಿನೇಶ್ ಗುಂಡೂರಾವ್
ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ನಡೆಸುತ್ತಿರುವ ಮೈಸೂರು ಪಾದಯಾತ್ರೆ ಈ ಶತಮಾನದ ಅತಿ ದೊಡ್ಡ ಜೋಕ್ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ʼಮುಡಾದಲ್ಲಿ 50-50ರ ಅನುಪಾತದಲ್ಲಿ ನಿವೇಶನ ನೀಡುವ ನಿಯಮ ತಂದಿದ್ದೇ ಬಿಜೆಪಿಯ ಅಧಿಕಾರಾವಧಿಯಲ್ಲಿ. ಈ ನಿಯಮದ ಅನುಸಾರ ಸಿದ್ದರಾಮಯ್ಯರಿಗೆ ಬದಲಿ ನಿವೇಶನ ಕೊಟ್ಟಿದ್ದು ಕೂಡ ಬಿಜೆಪಿಯ ಅಧಿಕಾರಾವಧಿಯಲ್ಲಿ. ಈಗ ಸಿದ್ದರಾಮಯ್ಯ ಅಕ್ರಮವಾಗಿ ಸೈಟ್ ಪಡೆದಿದ್ದಾರೆ ಎಂದು ಪಾದಯಾತ್ರೆ ಮಾಡುತ್ತಿರುವ ಬಿಜೆಪಿಯವರಿಗೆ ಮತಿಭ್ರಮಣೆಯಾಗಿದೆ ಎಂದು ಭಾವಿಸಬೇಕೋ ಅಥವಾ ಅವರ ಹುಚ್ಚು ಅತಿರೇಕಕ್ಕೆ ಹೋಗಿದೆ ಎಂದು ತಿಳಿಯಬೇಕೋ.?ʼ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ʼತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕ ಅಂಟಿಸಿಕೊಳ್ಳದ ವ್ಯಕ್ತಿತ್ವ ಸಿದ್ದರಾಮಯ್ಯ ಅವರದ್ದು. ಮುಡಾ ವಿಚಾರದಲ್ಲೂ ಸಿದ್ದರಾಮಯ್ಯ ಕಾನೂನಿನ ಅನುಸಾರವೇ ನಿವೇಶನ ಪಡೆದಿದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡ ಮುಡಾದಿಂದ ಕೈಗಾರಿಕಾ ನಿವೇಶನ ಪಡೆದಿದ್ದಾರೆ. ಬಿಜೆಪಿಯ ಹಲವು ನಾಯಕರ ಬಳಿ ಮುಡಾ ನಿವೇಶನಗಳಿವೆ. ಹೀಗಿರುವಾಗ ಸಿದ್ದರಾಮಯ್ಯ ಮಾತ್ರ ವಿಪಕ್ಷಗಳ ಟಾರ್ಗೆಟ್ ಯಾಕೆ.?. ಸಿದ್ದರಾಮಯ್ಯರು ಶೋಷಿತರು ಹಾಗೂ ಬಡವರ ಪಾಲಿನ ಧ್ವನಿಯಾಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ.? ಎಂದು ಕೇಳಿದ್ದಾರೆ.