ದೇಶದಲ್ಲೇ ಕಡಿಮೆ ಬೆಲೆಗೆ ಖರೀದಿಸಲು ಅವಕಾಶವಿದ್ದರೂ ವಿದೇಶದಿಂದ ಪಿಪಿಇ ಕಿಟ್ ಖರೀದಿಸಿದ್ದ ಬಿಜೆಪಿ ಸರಕಾರ : ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು : ‘ಪಿಪಿಇ ಕಿಟ್ ಖರೀದಿ ಅಕ್ರಮ ಕುರಿತು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಯೋಗದ ವರದಿಯು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಆಯೋಗ್ಯ ಸಚಿವ ಶ್ರೀರಾಮುಲು ವಿರುದ್ಧ ತನಿಖೆಗೆ ಶಿಫಾರಸು ಮಾಡಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಅಕ್ರಮಕ್ಕೆ ಸಂಬಂಧಿಸಿದಂತೆ ನಮ್ಮ ಸರಕಾರ ನ್ಯಾ.ಕುನ್ಹಾ ಆಯೋಗ ರಚನೆ ಮಾಡಿತ್ತು. ಆಯೋಗವು ಸಾವಿರ ಪುಟಗಳ ವರದಿ ಕೊಟ್ಟಿದ್ದು, ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ತನಿಖೆಗೆ ಶಿಫಾರಸು ಮಾಡಿದೆ. ಸಂಪುಟ ಉಪಸಮಿತಿ ಪರಿಶೀಲನೆ ಮಾಡುತ್ತಿದೆ. ಇದು ವೈಯಕ್ತಿಕ ವಿಚಾರಣೆ ಏನಲ್ಲ ಎಂದು ವಿವರಣೆ ನೀಡಿದರು.
ಈ ಹಿಂದೆ ನಾವು ವಿಪಕ್ಷದಲ್ಲಿದ್ದ ವೇಳೆ ಆರೋಪ ಮಾಡಿದ್ದೆವು. ನಮ್ಮ ಪಕ್ಷದಿಂದ ತನಿಖೆ ಮಾಡಿ ವರದಿ ಕೊಟ್ಟಿದ್ದೆವು. ಸರಕಾರಕ್ಕೆ ವರದಿ ಒಪ್ಪಿಸಿದ್ದೆವು. ನಿಯಮ ಬದಿಗೊತ್ತಿ ಅಂದು ನಿರ್ಧಾರ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದ ಮೇಲೆ ಆಯೋಗಕ್ಕೆ ತನಿಖೆಗೆ ಕೊಟ್ಟಿದ್ದೆವು. ಈಗ ಮಧ್ಯಂತರ ವರದಿ ಕೊಟ್ಟಿದ್ದಾರೆ. ಅಂತಿಮ ವರದಿಯನ್ನೂ ಕೊಡಬೇಕಿದೆ ಎಂದು ಅವರು ನುಡಿದರು.
ಪಿಪಿಇ ಕಿಟ್ ಖರೀದಿ ಅಕ್ರಮ ಕುರಿತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಅವರಿಗೆ ನೋಟಿಸ್ ನೀಡಿ ಉತ್ತರ ಪಡೆಯಬೇಕು. ನಿಯಮಗಳ ಅಡಿಯಲ್ಲೇ ನಾವು ಹೋಗಬೇಕು. ಇವರು ಲೂಟಿ ಮಾಡಿರುವುದು ಸ್ಪಷ್ಟ. ಸಿಎಂ, ಸಚಿವರು ಭಾಗಿಯಾಗಿಯಾಗಿದ್ದು, ಕಿಟ್ ಖರೀದಿಯಲ್ಲಿ ಅಕ್ರಮ ಮಾಡಿದ್ದಾರೆ. ದೇಶದಲ್ಲಿ ಪಿಪಿಇ ಕಿಟ್ ಖರೀದಿಗೆ ಅವಕಾಶವಿತ್ತು. ಆದರೆ, ಅವರು ವಿದೇಶದಿಂದ ತರಿಸಿದ್ದು, 14 ಕೋಟಿ ರೂ. ಹೆಚ್ಚು ಹಣ ಪಾವತಿ ಮಾಡಿದ್ದಾರೆಂದು ದೂರಿದರು.
ಈ ಸಂಬಂಧ ಸಂಪುಟ ಉಪಸಮಿತಿ ಸಭೆ ನಡೆಸಿದ್ದೇವೆ. ಇನ್ನು ಬೇಕಾದಷ್ಟು ಆರೋಪಗಳಿವೆ. ವೆಂಟಿಲೇಟರ್, ಉಪಕರಣ ಖರೀದಿ ಮಾಡಿದ್ದಾರೆ. ಹೇಗೆ ತನಿಖೆ ಮಾಡಬೇಕುಂಬ ನಿರ್ಧಾರವನ್ನು ಸಂಪುಟ ಉಪ ಸಮಿತಿಯಲ್ಲಿ ತೆಗೆದುಕೊಳ್ಳುತ್ತೇವೆ. ಹೆಣದ ಮೇಲೆ ಹಣ ಮಾಡಿದರೂ, ಹೆಚ್ಚಿನ ಬೆಲೆಗೆ ಔಷಧ ಮತ್ತು ಉಪಕರಣಗಳನ್ನು ಖರೀದಿ ಮಾಡಿದ್ದಾರೆ ಎಂದರು.
ಕೋವಿಡ್ ಸಂಕಷ್ಟದಲ್ಲೂ ಅಕ್ರಮ ನಡೆಸಿದ್ದು, ಅಂದಿನ ಸಿಎಂ ಯಡಿಯೂರಪ್ಪರೇ ಕಾರಣ ಎಂದು ಆಯೋಗ ತಿಳಿಸಿದೆ. ಈ ಖರೀದಿ ನಂತರವೂ ಮತ್ತೆ ಖರೀದಿಸಿದ್ದಾರೆ. ನಮ್ಮ ದೇಶದಲ್ಲೇ ಕಡಿಮೆ ಬೆಲೆಗೆ ಸಿಗುತ್ತಿತ್ತು. ಹಾಗಿದ್ದರೂ ಅವರು ಹೊರದೇಶದಿಂದ ಖರೀದಿಸಿದ್ದಾರೆ. ಇದರ ಬಗ್ಗೆ ಎಸ್ಐಟಿ ತನಿಖೆ ಮಾಡಬೇಕಾ? ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಮಾಡಬೇಕಾ? ಎನ್ನುವುದರ ಬಗ್ಗೆ ಸಂಪುಟ ಉಪಸಮಿತಿಯಲ್ಲಿ ಚರ್ಚಿಸುತ್ತೇವೆ ಎಂದರು.