ಮುನಿರತ್ನರನ್ನು ಬಿಜೆಪಿ ಪಕ್ಷದಿಂದ ಮೊದಲು ಉಚ್ಚಾಟಿಸಬೇಕು : ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು : ‘ಬಿಜೆಪಿ ಶಾಸಕ ಮುನಿರತ್ನ ಕುರಿತು ಆ ಪಕ್ಷದ ನಾಯಕರು ತುಟಿ ಬಿಚ್ಚಬೇಕು. ಅವರನ್ನು ಪಕ್ಷದಿಂದ ಮೊದಲು ಉಚ್ಚಾಟಿಸಬೇಕು. ಈ ಮೂಲಕ ತಮ್ಮ ಬಿಜೆಪಿ ತನ್ನ ನಿಲುವನ್ನು ಕರ್ನಾಟಕದ ಜನತೆಗೆ ತೋರ್ಪಡಿಸಬೇಕು. ಈ ದಮ್ಮು, ತಾಕತ್ತು ರಾಜ್ಯ ಬಿಜೆಪಿ ಪಕ್ಷಕ್ಕಿದೆಯೇ?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಒಕ್ಕಲಿಗ ಸಮುದಾಯದ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದನೆ ಮಾಡಿರುವುದು ಈಗ ಎಸ್ಐಟಿಗೆ ದೊರಕಿರುವ ಎಫ್ಎಸ್ಎಲ್ ವರದಿಯಲ್ಲಿ ಸಾಬೀತಾಗಿದೆ. ಮುನಿರತ್ನ ಒಕ್ಕಲಿಗ ಸಮುದಾಯದ ಕುರಿತು ಕೀಳಾಗಿ ಮಾತನಾಡಿರುವುದಷ್ಟೇ ಅಲ್ಲ, ಆ ಸಮುದಾಯದ ಹೆಣ್ಣುಮಕ್ಕಳ ಬಗ್ಗೆಯೂ ನಾಲಿಗೆ ಹರಿಬಿಟ್ಟಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.
‘ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದಕರಷ್ಟೇ ಅಲ್ಲ ಮಹಿಳಾ ಪೀಡಕರೂ ಹೌದು ಎಂಬುದು ಈಗ ಸಾಬೀತಾಗಿದೆ. ಈ ಸತ್ಯ ಗೊತ್ತಿದ್ದರೂ ಬಿಜೆಪಿ ಮುನಿರತ್ನ ಬೆನ್ನಿಗೆ ನಿಂತಿದೆ. ಈ ಮೂಲಕ ಬಿಜೆಪಿಯು ಸ್ವಭಾವತಃ ಮಹಿಳಾ ವಿರೋಧಿ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ‘ಹಿಂದೂ ನಾವೆಲ್ಲ ಒಂದು’ ಎನ್ನುವ ಬಿಜೆಪಿ ನಾಯಕರು ಇತರ ಜಾತಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆಂಬುದಕ್ಕೆ ಮುನಿರತ್ನ ಪ್ರಕರಣವೇ ಸಾಕ್ಷಿ.
ಇನ್ನು ಅತ್ಯಾಚಾರಿಗಳನ್ನು, ಮಹಿಳಾ ಪೀಡಕರನ್ನು ತಮ್ಮ ಪಕ್ಷದಲ್ಲಿಯೇ ಇಟ್ಟುಕೊಂಡು 'ಭೇಟಿ ಬಚಾವೋ, ಭೇಟಿ ಪಡಾವೋ' ಎನ್ನುವ ಮೋದಿಯವರ ಘೋಷಣೆ ಹಾಸ್ಯಾಸ್ಪದವಾಗಿ ಕಾಣುತ್ತದೆ. ವಾಸ್ತವವಾಗಿ ಬಿಜೆಪಿ ಮತ್ತು ಬಿಜೆಪಿ ನಾಯಕರಿಂದ ರಾಜ್ಯದ ಹೆಣ್ಣುಮಕ್ಕಳಿಗೆ ರಕ್ಷಣೆ ಸಿಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.