ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡರ ಕುಟುಂಬದ ವರ್ಚಸ್ಸು ಹಾಳು ಮಾಡಲು ಯತ್ನ: ಎಚ್.ಡಿ. ಕುಮಾರಸ್ವಾಮಿ ಆರೋಪ
"ವಿಡಿಯೋದಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದಕ್ಕೆ ಪುರಾವೆ ಏನು?"
ಎಚ್.ಡಿ. ಕುಮಾರಸ್ವಾಮಿ (Photo : X/@hd_kumaraswamy)
ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದ ವರ್ಚಸ್ಸು ಹಾಳು ಮಾಡಲು ರಾಜ್ಯ ಸರಕಾರ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪೆನ್ಡ್ರೈವ್ ಹಂಚಿಕೆ ಹಿಂದೆ ರಾಜ್ಯ ಸರಕಾರದ ನೇರ ಪಾತ್ರವಿದೆ. ಈ ಪ್ರಕರಣವನ್ನು ಮುಂದೆ ಇಟ್ಟುಕೊಂಡು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು ದೇವೇಗೌಡ ಕುಟುಂಬದ ವರ್ಚಸ್ಸು ಹಾಳು ಮಾಡುವಂತಹ ನೀಚ ರಾಜಕಾರಣ ಮಾಡುತ್ತಿದ್ದಾರೆಂದು ದೂರಿದರು.
ಈ ಪ್ರಕರಣವನ್ನು ನಾವು ಧೈರ್ಯದಿಂದ ಎದುರಿಸುತ್ತೇವೆ. ವಿಡಿಯೋದಲ್ಲಿ ಇರುವ ಮಹಿಳೆಯರ ಮುಖವನ್ನು ಕನಿಷ್ಠವಾಗಿಯಾದರೂ ಮುಸುಕು ಮಾಡಬೇಕಿತ್ತು. ಆದರೇ ಹಾಗೆಯೇ ಇರುವುದರಿಂದ ಹೆಣ್ಣುಮಕ್ಕಳ ಕುಟುಂಬಗಳ ಕತೆಯೇನು?. ಅವರ ಜೀವಕ್ಕೆ ಹೆಚ್ಚು ಕಡಿಮೆಯಾದರೇ ಸರಕಾರವೇ ನೇರ ಹೊಣೆ ಎಂದು ಕುಮಾರಸ್ವಾಮಿ ಹೇಳಿದರು.
ಈ ಹಿಂದೆ ಮುಖ್ಯಮಂತ್ರಿ ಪುತ್ರನ ಪ್ರಕರಣವನ್ನು ನಾವು ಈ ನೀಚ ರಾಜಕಾರಣಕ್ಕೆ ನಿಮ್ಮ ಹಾಗೆ ಬಳಸಿಕೊಳ್ಳುವುದಿಲ್ಲ. ನಿಮ್ಮ ಮಗನ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಳಿಸಿದ್ದಾರೆ. ನೀವು ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಅದು ಬಿಟ್ಟು ಮೋದಿಯವರ ಹೆಸರನ್ನು ಈ ಪ್ರಕರಣದಲ್ಲಿ ಏಕೆ ಎಳೆದು ತರುತ್ತಿದ್ದೀರಿ ಎಂದು ಅವರು ವಾಗ್ದಾಳಿ ನಡೆಸಿದರು.
ಈ ಅಶ್ಲೀಲ ವಿಡಿಯೊ ಪ್ರಕರಣ ಹರಿ ಬಿಡುವ ಮೂಲಕ ಜನರಿಗೆ ಸರಕಾರ 6ನೆ ಗ್ಯಾರಂಟಿ ನೀಡಿದೆ. ಈ ಪ್ರಕರಣದ ಹೊಸ ಅಧ್ಯಾಯ ಆರಂಭವಾಗಿದೆ. ನಾವು ಹೆದರುವುದಿಲ್ಲ. ಧೈರ್ಯವಾಗಿ ಎದುರಿಸುತ್ತೇವೆ. ಅಲ್ಲದೆ, ಹಾಸನ ಜಿಲ್ಲಾಧಿಕಾರಿಗೆ ಈ ರೀತಿ ಹೇಳಿಕೆ ಕೊಡಲು ಅಧಿಕಾರ ಕೊಟ್ಟವರು ಯಾರು?. ನೀವೇನು ನ್ಯಾಯಾಧೀಶರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ತಪ್ಪಿತಸ್ಥರವೆಂದು ಸಾಬೀತು ಆಗಲಿ:ಎಚ್ಡಿಕೆ
ವಿಡಿಯೋದಲ್ಲಿ ಪ್ರಜ್ವಲ್ ಮುಖ ಕಾಣಿಸುತ್ತಿದೆಯೇ? ವಿಡಿಯೋದಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದಕ್ಕೆ ಪುರಾವೆ ಏನು? ಆದರೂ ನೈತಿಕತೆಯ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥ ಎಂದು ಸಾಬೀತು ಆದರೆ, ಖಾಯಂ ಆಗಿ ಅಮಾನತು ಮಾಡುತ್ತೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ನಿಂದ ಅಮಾನತು ಮಾಡಿರುವುದು ಸ್ವಾಗತಾರ್ಹ. ನಾವು ಈ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಮೂಗು ತೂರಿಸಲ್ಲ. ಕಾನೂನು ಕ್ರಮ ತೆಗೆದುಕೊಳ್ಳಲಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪೊಲೀಸರು ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಅಲ್ಲದೆ, ಈಗಾಗಲೇ ಚುನಾವಣೆ ನಡೆದಿದೆ. ಅವರು ಇನ್ನೂ ಎನ್ಡಿಎ ಮೈತ್ರಿಯಿಂದ ಗೆದ್ದಿಲ್ಲ. ಗೆದ್ದ ಬಳಿಕ ನಮ್ಮ ಪಕ್ಷ ಏನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತದೆ.
-ಆರ್.ಅಶೋಕ್, ವಿರೋಧ ಪಕ್ಷದ ನಾಯಕ