ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬಂಧಿಸಲಿದೆ: ಗೃಹ ಸಚಿವ ಜಿ.ಪರಮೇಶ್ವರ್
Photo: PTI
ಬೆಂಗಳೂರು: ಪೊಲೀಸ್ ಇಲಾಖೆಯ ವ್ಯಾಪ್ತಿಗೆ ಬರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬಂಧಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯು ಏರ್ಪಡಿಸಿದ್ದ 5ನೆ ರಾಜ್ಯ ಮಟ್ಟದ ಜಾಗೃತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವರ ಮತ್ತು ನೀಡುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸುವ ಅಧಿಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸಿಗಲಿದೆ. ಇದರಿಂದ ನಕಲಿ ಜಾತಿ ಪ್ರಮಾಣಪತ್ರ ಹಾವಳಿಗೆ ಕಡಿವಾಣ ಬೀಳಲಿದೆ ಎಂದರು.
ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡ ಕವಲುದಾರಿಯಲ್ಲಿದೆ. ಯಾವುದೇ ಸರಕಾರವಾಗಲಿ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡುತ್ತದೆ. ಎಸ್ಸಿ, ಎಸ್ಟಿ ಸಮುದಾಯದ ಜನ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಯಾರೊಬ್ಬರು ಚರ್ಚಿಸುವುದಿಲ್ಲ. ದೇಶದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಕೊಡದೇ ಹೋಗಿದ್ದರೆ ಶೋಷಿತ ಸಮುದಾಯಗಳು ಯಾವ ಪರಿಸ್ಥಿತಿಯಲ್ಲಿ ಇರುತ್ತಿದ್ದವು ಎಂದು ಊಹಿಸಿಕೊಳ್ಳಲು ಅಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.
ಜಾತಿಗಣತಿ ವರದಿಯಲ್ಲಿ ಯಾವ ಜಾತಿಯ ಜನಸಂಖ್ಯೆ ಹೆಚ್ಚಿದ್ದಾರೆ, ಯಾವ ಜಾತಿ ಜನ ಕಡಿಮೆ ಇದ್ದಾರೆ ಎಂಬುದು ಅನಧಿಕೃತವಾಗಿ ಗೊತ್ತಾದ ತಕ್ಷಣ ಅಸಹನೆಯ ಮಾತು ಕೇಳಿ ಬರುತ್ತಿವೆ. ಜಾತಿಗಣತಿ ವರದಿಗೆ ತೀವ್ರ ವಿರೋಧವಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕರಿಸಿದ್ದಾರೆ. ಈ ವರದಿಯನ್ನು ಜಾರಿಗೊಳಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಸದನದಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಎಸ್ಸಿ, ಎಸ್ಟಿ ಸಮುದಾಯದ ಜನ ಒಟ್ಟಾಗಿ ಕೆಲಸ ಮಾಡಿದರೆ 125 ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಹುದು.
ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಮುಂದಿನ 5 ವರ್ಷದೊಳಗೆ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಇದರಲ್ಲಿ ಶೇ. 18ರಷ್ಟು ಬ್ಯಾಕ್ಲಾಗ್ ಹುದ್ದೆಗಳು ಸಿಗಲಿದ್ದು, ಬ್ಯಾಕ್ಲಾಗ್ ಹುದ್ದೆಗಳನ್ನು ಮೊದಲು ನೇಮಕಾತಿ ಮಾಡಲಾಗುವುದು. ಎಸ್ಸಿ, ಎಸ್ಟಿ ಸಮುದಾಯಗಳ ರಕ್ಷಣೆಗಾಗಿಯೇ ನಾವಿದ್ದೇವೆ ಎಂದು ಅವರು ಹೇಳಿದರು.
ರಾಜ್ಯದ ಕಾನೂನು ವಿಶ್ವವಿದ್ಯಾಲಯಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೆಸರು ಇಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚಿಸಲಾಗುವುದು. ಇನ್ನಿತರ ಬೇಡಿಕೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ, ಮೈಸೂರಿನ ಉರಿಲಿಂಗ ಪೆದ್ದಿ ಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜಿ, ಅರಳಯ್ಯ ಸ್ವಾಮೀಜಿ, ಚಿಂತಕ ಬಿ.ಗೋಪಾಲ್, ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಶಿವಶಂಕರ್ ಉಪಸ್ಥಿತರಿದ್ದರು.