ಪಿಎಸ್ಐ ಅಕ್ರಮದ ವರದಿ ಕುರಿತು ಸಿಎಂ ಜತೆ ಚರ್ಚಿಸಿ ಕ್ರಮ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಪಿಎಸ್ಐ ಮರುಪರೀಕ್ಷೆ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ಪಿಎಸ್ಐ ಪರೀಕ್ಷೆ ಇವತ್ತು ನಡೆಯುತ್ತಿದೆ. ಕಳೆದ ಬಾರಿಯ ರೀತಿ ಆಗದಂತೆ ಈ ಪರೀಕ್ಷೆಯಮನ್ನು ಎಚ್ಚರಿಕೆಯಿಂದ ನಡೆಸುತ್ತಿದ್ದೇವೆ. ಹೈಕೋರ್ಟ್ ಆದೇಶದ ಪ್ರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಕಳೆದ ಬಾರಿ ಅಕ್ರಮದ ಕುರಿತು ನ್ಯಾ. ವೀರಪ್ಪ ಅವರ ಆಯೋಗದ ವರದಿ ಕೊಟ್ಟಿದೆ. ನಾನು ಅ ವರದಿಯನ್ನ ನೋಡಿಲ್ಲ. ಮುಖ್ಯಮಂತ್ರಿಯವರಿಗೆ ನೀಡಿದ್ದಾರೆ. ವರದಿಯಲ್ಲಿ ಏನು ಶಿಫಾರಸು ಮಾಡಿದ್ದಾರೋ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಅದರಲ್ಲಿ ಯಾರ ಹೆಸರು ಇದೆ ಎಂಬುದು ಗೊತ್ತಿಲ್ಲ. ನಾವೆಲ್ಲ ಸಿಎಂ ಜೊತೆ ಕುಳಿತು ವರದಿ ವಿಶ್ಲೇಷಣೆ ಮಾಡುತ್ತೇವೆ. ಅಕ್ರಮದ ಬಗ್ಗೆ ಬಹಿರಂಗ ಹೇಳಿಕೆ ನೀಡಿದವರು ಸಮಿತಿಯು ವಿಚಾರಣೆ ವೇಳೆ ಕರೆದಾಗ ಹೋಗಿರಲಿಲ್ಲ. ಅದು ಯಾವ ರೀತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ನಿರ್ಧಾರ ಏನು ಮಾಡುವುದು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಹೇಳಿದರು
ಆಡಿಯೋ ವೈರಲ್ ಪ್ರಕರಣಕ್ಕು ಪಿಎಸ್ಐ ಮರುಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಎಸ್ಐ ಲಿಂಗಯ್ಯ ಎಂಬುವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಆರೋಪಿತ ಎಸ್ಐ ಇಂಟಲಿಜೆನ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಪರೀಕ್ಷೆಯಲ್ಲಿಯೂ ಅಕ್ರಮ ನಡೆಯುತ್ತಿರಬಹುದು. ಅದರ ಸುಳಿವು ಸಿಗಬಹುದು ಎಂಬ ನಿಟ್ಟಿನಲ್ಲಿ ನಕಲಿ (Fake call) ಕರೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಸಿಸಿಬಿ ಅವರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಇರಬೇಕು ಎಂಬುದು ಪಾದಯಾತ್ರೆಯ ಉದ್ದೇಶ
ರಾಹುಲ್ ಗಾಂಧಿ ಅವರು ಹಿಂದೆ ಭಾರತ್ ಜೋಡೋ ಪಾದ ಯಾತ್ರೆ ಮಾಡಿದ್ದರು. ದೇಶದಲ್ಲಿ ಒಳ್ಳೆ ವಾತಾವರಣ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಇರಬೇಕು ಎಂಬುದು ಪಾದಯಾತ್ರೆಯ ಉದ್ದೇಶ. ಅದು ಮುಂದುವರೆದ ಭಾಗವಾಗಿ ಈಗ 6 ಸಾವಿರ ಕಿ.ಮೀ ಮತ್ತೆ ಪಾದಯಾತ್ರೆ ಆರಂಭಿಸಿದ್ದಾರೆ. ಅದು ಶಾಂತಿಯುತವಾಗಿ ಕೈಗೊಂಡಿದ್ದಾರೆ. ಶಾಂತಿ ಸಂದೇಶ ಸಾರಲು ನಡೆಸುತ್ತಿದ್ದಾರೆ. ಅದರೆ ಅಸ್ಸಾಂ ಮುಖ್ಯಮಂತ್ರಿಯವರು ಬೇಕಂತಲೇ ಅಡ್ಡಿ ಪಡಿಸುತ್ತಿದ್ದಾರೆ ಎಂದರು.
ಬಿಜೆಪಿಯವರು ಉದ್ದೇಶಪೂರ್ವಕವಾಗಿ ಪಾದಯಾತ್ರೆಯನ್ನು ತಡೆಯುವುದು, ಯಾತ್ರಿಗಳ ಮೇಲೆ ಗಲಾಟೆ ಮಾಡುತ್ತಿದ್ದಾರೆ. ಯಾತ್ರೆಯಿಂದ ಬಿಜೆಪಿಗೆ ಭಯ ಅಗುತ್ತಿರಬಹುದು ಅನ್ನಿಸುತ್ತದೆ. ಅಸ್ಸಾಂ ಮುಖ್ಯಮಂತ್ರಿಗೆ ಏನು ನೋವಿದೆಯೋ ಗೊತ್ತಿಲ್ಲ. ಅವರು ನಮ್ಮ ಪಕ್ಷದಲ್ಲಿ ಇದ್ದವರು. ಇಂತಹ ಯಾತ್ರೆಗೆ ಅವಕಾಶ ಕೊಡಲಿಲ್ಲ ಅಂದರೆ ಹೇಗೆ. ರಾಹುಲ್ ಗಾಂಧಿಗೆ ಹೀಗೆ ಆದರೆ, ದೇಶದಲ್ಲಿನ ಸಾಮಾನ್ಯ ಜನರ ಕಥೆ ಏನು? ಹೀಗಾಗಿ ದೇಶ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಜೈ ಶ್ರೀರಾಮ್ ಅಂದರೆ ತಪ್ಪೇನು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಅಂದರೆ ತಪ್ಪೇನು. ನಾವೆಲ್ಲರೂ ಜೈ ಶ್ರೀರಾಮ್ ಅಂತ ಹೇಳಿದ್ದೇವೆ. ಹೇಳದೇ ಇದ್ದರೆ ಶ್ರೀರಾಮನ ವಿರೋಧ ಅಂತಾರೆ. ಹೇಳಿದರೆ ಹೀಗೆ ಅಂತಾರೆ. ಇದರಲ್ಲಿ ಯಾವುದು ಸರಿ ಎಂದರು.
ನಾವೆಲ್ಲ ಶ್ರೀರಾಮನ ಭಕ್ತರೇ. ಒಂದಲ್ಲ ಒಂದು ರೀತಿ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಅಂತ ಹೇಳುತ್ತೀವಿ. ಶ್ರೀರಾಮ ಬರೀ ನಾಲ್ಕು ಜನಕ್ಕೆ ಸೀಮಿತವಲ್ಲ. ನಮಗೆ ದಶರಥ ರಾಮ ಬೇಕು. ಮೋದಿಯ ರಾಮ ಬೇಕಾಗಿಲ್ಲ. ನಮಗೆ ಈ ದೇಶವನ್ನು ರಾಮರಾಜ್ಯ ಮಾಡಿದ ದಶರಥ ರಾಮ ಬೇಕೆ ಹೊರತು. ರಾಮನ ಹೆಸರು ಹೇಳಿಕೊಂಡು ಒಡೆದಾಳುವ ನೀತಿ ಆಚರಣೆ ಮಾಡುವವರು ಬೇಕಿಲ್ಲ ಎಂದು ಹೇಳಿದರು.