ವಿಧಾನ ಪರಿಷತ್ ಚುನಾವಣೆ ಬಗ್ಗೆ ಜೆಡಿಎಸ್ ಜೊತೆ ಚರ್ಚೆ: ಬಿ.ವೈ. ವಿಜಯೇಂದ್ರ
![ವಿಧಾನ ಪರಿಷತ್ ಚುನಾವಣೆ ಬಗ್ಗೆ ಜೆಡಿಎಸ್ ಜೊತೆ ಚರ್ಚೆ: ಬಿ.ವೈ. ವಿಜಯೇಂದ್ರ ವಿಧಾನ ಪರಿಷತ್ ಚುನಾವಣೆ ಬಗ್ಗೆ ಜೆಡಿಎಸ್ ಜೊತೆ ಚರ್ಚೆ: ಬಿ.ವೈ. ವಿಜಯೇಂದ್ರ](https://www.varthabharati.in/h-upload/2024/01/21/1235223-.webp)
ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಿರಿಯರು ಸಭೆ ಸೇರಿ ಮುಂದಿನ ವಿಧಾನಪರಿಷತ್ ಉಪ ಚುನಾವಣೆ, ವಿಧಾನ ಪರಿಷತ್ತಿನ ಉಳಿದ 6 ಸ್ಥಾನಗಳ ಚುನಾವಣೆ ಕುರಿತು ಚರ್ಚಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಲ್ಲ ಕ್ಷೇತ್ರಗಳ ಕುರಿತು ಸವಿಸ್ತಾರವಾಗಿ ಚರ್ಚೆ ಆಗಿದೆ. ಚರ್ಚಿತ ಅಂಶಗಳ ಕುರಿತಂತೆ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದು ಅತಿ ಶೀಘ್ರವೇ ಅಭ್ಯರ್ಥಿಗಳ ಘೋಷಣೆಗೆ ತೀರ್ಮಾನಿಸಿದ್ದೇವೆ. ಅರ್ಥಪೂರ್ಣ ಚರ್ಚೆ ನಡೆದಿದೆ. ಕಾರ್ಯಕರ್ತರು ತಳಮಟ್ಟದಲ್ಲಿ ಹೊಂದಿಕೊಂಡು ಹೋಗುವ ಸಮಸ್ಯೆ ಇಲ್ಲ. ಲೋಕಸಭೆ ಚುನಾವಣೆ ಸಂಬಂಧ ಮುಂದಿನ ದಿನಗಳಲ್ಲಿ ವರಿಷ್ಠರು ಚರ್ಚಿಸಲಿದ್ದಾರೆ ಎಂದು ಎಂದು ನುಡಿದರು.
ಯಡಿಯೂರಪ್ಪನವರು, ಜಡಿಎಸ್‍ನ ಕುಮಾರಸ್ವಾಮಿಯವರು ಸೇರಿ ವಿಧಾನ ಪರಿಷತ್ ಚುನಾವಣೆ ಸಂಬಂಧ ಚರ್ಚೆ ಮಾಡಿದ್ದೇವೆ. ಅಭ್ಯರ್ಥಿ ವಿಷಯದಲ್ಲಿ ಗೊಂದಲ ಇಲ್ಲ. ಎಲ್ಲ ಕ್ಷೇತ್ರಗಳ ಕುರಿತು ಸವಿಸ್ತಾರವಾದ ಚರ್ಚೆ ಆಗಿದೆ ಎಂದು ಅವರು ತಿಳಿಸಿದರು.
ರಜೆ ಪ್ರಕಟಿಸಲು ಆಗ್ರಹ: ನಾಳೆ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸಾರ್ವಜನಿಕ ರಜೆ ಘೋಷಿಸಬೇಕು. ಸಿದ್ದರಾಮಯ್ಯನವರು ಈಗಲಾದರೂ ಈ ಕುರಿತು ನಿರ್ಧಾರ ಮಾಡಬೇಕಿದೆ ಎಂದು ಅವರು ಒತ್ತಾಯಿಸಿದರು.