ಮಾಜಿ ಶಾಸಕ ವಾಸು ಅವರನ್ನು ಕಾಂಗ್ರೆಸ್ ನಿಂದ ವಜಾಗೊಳಿಸಿ: ಸಿಎಂ ಬೆಂಬಲಿಗನಿಂದ ಮೈಸೂರು ಜಿಲ್ಲಾಧ್ಯಕ್ಷರಿಗೆ ಪತ್ರ
- ವಾಸು-ಮಾಜಿ ಶಾಸಕ
ಮೈಸೂರು, ಜು.18: ಮಾಜಿ ಶಾಸಕ ವಾಸು ಅವರನ್ನ ಪಕ್ಷದಿಂದ ವಜಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರೊಬ್ಬರು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆಂಬ ಆರೋಪ ಹಿನ್ನೆಲೆ ಮಾಜಿ ಶಾಸಕ ಪಿ. ವಾಸು ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಿ ಮಾಜಿ ನಗರಸಭೆ ಸದಸ್ಯ, ಆರ್.ಸುನಂದಕುಮಾರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಮೂರ್ತಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?
'ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಸು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ ಇದ್ದುಕೊಂಡು ಬಿಜೆಪಿ ಪರವಾಗಿ ಮತಯಾಚನೆ ಮಾಡಿದ್ದಾರೆ. ಕುರುಬರು ಹಾಗೂ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ತಮ್ಮ ಬೆಂಬಲಿಗರಿಗೆ ಹಣ ಕೊಟ್ಟು ಬಿಜೆಪಿ ಪರ ಕೆಲಸ ಮಾಡಿಸಿದ್ದಾರೆ. ಬಿಜೆಪಿಯಲ್ಲಿ ತಮ್ಮ ಮಗ ಸ್ಪರ್ಧಿಸಿರುವ ಕಾರಣ ಅವರ ಪರ ಕೆಲಸ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.
'ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವು ಕೆಲಸ ಮಾಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ವಿರುದ್ಧವೂ ವಾಸು ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನ ಪಕ್ಷದಿಂದ ವಜಾ ಮಾಡಿ' ಎಂದು ಸುನಂದಕುಮಾರ್ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
- ಬಿಜೆಪಿಯಿಂದ ಸ್ಪರ್ಧಿಸಿದ್ದ ವಾಸು ಪುತ್ರ ಕವೀಶ್ಗೌಡ
ಇನ್ನು ವಾಸು ಪುತ್ರ ಕವೀಶ್ಗೌಡ ಬಿಜೆಪಿ ಸೇರಿ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.