ಪ್ರಕರಣ ದಾಖಲಾದ ತಕ್ಷಣ ನೌಕರನ ವಜಾ ಸರಿಯಲ್ಲ: ಹೈಕೋರ್ಟ್
ಬೆಂಗಳೂರು: ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂಬ ಒಂದೇ ಕಾರಣಕ್ಕೆ ಸರಕಾರದ ಕಾಯಂ ಉದ್ಯೋಗಿಯನ್ನು ಸೇವೆಯಿಂದ ವಜಾಗೊಳಿಸುವಂತಿಲ್ಲ ಎಂದು ಸ್ಪಷ್ಟಪಡಿಸಿ ಹೈಕೋರ್ಟ್ ಆದೇಶಿಸಿದೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಗಣೇಶ್ ಎಂಬಾತನನ್ನು ಬಿಲ್ ಕಲೆಕ್ಟರ್ ಉದ್ಯೋಗದಿಂದ ವಜಾಗೊಳಿಸಲು ತಾನು ತೆಗೆದುಕೊಂಡಿದ್ದ ನಿರ್ಣಯವನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಅತ್ತಿಕರಿಬೆಟ್ಟು ಗ್ರಾಮ ಪಂಚಾಯತಿ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.
ದಾಖಲಾಗಿರುವ ಕ್ರಿಮಿನಲ್ ಪ್ರಕರಣ ವಿಚಾರಣೆಗೆ ಬಾಕಿಯಿದೆ ಎಂಬ ಕಾರಣಕ್ಕೆ ಉದ್ಯೋಗಿಯನ್ನು ವಜಾಗೊಳಿಸಲಾಗದು. ಹೀಗಾಗಿ, ಅತ್ತಿಕರಿಬೆಟ್ಟು ಗ್ರಾ.ಪಂ.ಉದ್ಯೋಗಿಯಾದ ಗಣೇಶ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಆತನನ್ನು ಸೇವೆಯಿಂದ ವಜಾಗೊಳಿಸಿರುವುದು ದೋಷಪೂರಿತವಾಗಿದೆ ಎಂದು ವಿಭಾಗೀಯ ಪೀಠ ಆದೇಶದಲ್ಲಿ ಹೇಳಿದೆ.
ಮೂಲ್ಕಿ ತಾಲೂಕು ನಿವಾಸಿ ಗಣೇಶ್, ದಕ್ಷಿಣ ಕನ್ನಡದ ಅತ್ತಿಕರಿಬೆಟ್ಟು ಗ್ರಾ.ಪಂ.ಕಚೇರಿಯ ಬಿಲ್ ಕಲೆಕ್ಟರ್ ಉದ್ಯೋಗ ಮಾಡುತ್ತಿದ್ದರು. ಅವರ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಉದ್ಯೋಗದಿಂದ ಗಣೇಶ್ ಅವರನ್ನು ವಜಾಗೊಳಿಸಲು 2020ರ ಜ.23ರಂದು ಗ್ರಾಪಂ ನಿರ್ಣಯಿಸಿತ್ತು.