ಡಿಸೆಂಬರ್ ನಿಂದ ಶಾಲಾ ಮಕ್ಕಳಿಗೆ ‘ರಾಗಿ ಮಾಲ್ಟ್’ ವಿತರಣೆ: ಸಚಿವ ಮಧು ಬಂಗಾರಪ್ಪ
ಬೆಂಗಳೂರು, ನ. 16: ರಾಜ್ಯದ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಹಾಲಿನ ಜೊತೆಗೆ ‘ರಾಗಿ ಮಾಲ್ಟ್’ ಅನ್ನು ಡಿಸೆಂಬರ್ ತಿಂಗಳಿನಿಂದ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್‍ಜಿಒ ಸಹಯೋಗದಲ್ಲಿ ಎರಡು ಜಿಲ್ಲೆಗಳ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ವಿತರಣೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದರು. ಅದು ಯಶಸ್ವಿಯಾಗಿದೆ. ಹೀಗಾಗಿ ಇದನ್ನು ರಾಜ್ಯಾದ್ಯಂತ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದರು.
ಸರಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿಸಲು ಗ್ರಾಮೀಣ ಪ್ರದೇಶದ 3 ಸಾವಿರ ಶಾಲೆಗಳನ್ನು ಕರ್ನಾಟಕ ಸಾರ್ವಜನಿಕ ಶಾಲೆಗಳಾಗಿ(ಕೆಪಿಎಸ್) ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಎರಡು ಗ್ರಾಮ ಪಂಚಾಯಿತಿಗಳಿಗೆ ಒಂದು ಶಾಲೆಯಂತೆ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಸುಮಾರು 600 ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕೆಪಿಎಸ್ ಶಾಲೆಗಳಲ್ಲಿ ಶಿಶುವಿಹಾರದಿಂದ 12ನೆ ತರಗತಿಯವರೆಗೆ ಇಂಗಿಷ್ ಮಾಧ್ಯಮದಲ್ಲಿ ಪಾಠಗಳನ್ನು ಮಾಡಲಾಗುತ್ತದೆ. ‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‍ಆರ್)’ ನಿಧಿಯ ಮೂಲಕ ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಸರಿಯಾದ ಮೂಲಸೌಕರ್ಯ ಮತ್ತು ಎಲ್ಲಾ ಸೌಲಭ್ಯಗಳೊಂದಿಗೆ ನಾವು ಈ ಶಾಲೆಗಳನ್ನು ಉನ್ನತೀಕರಿಸುತ್ತೇವೆ ಎಂದು ಅವರು ಹೇಳಿದರು.
ಕಾರ್ಪೊರೇಟ್ ಕಂಪೆನಿಗಳು ಮತ್ತು ಎನ್‍ಜಿಒಗಳಿಂದ ಶಾಲೆಗಳ ಅಭಿವೃದ್ಧಿಗಾಗಿ ಸುಮಾರು 2,500 ಕೋಟಿ ರೂ. ಸಿಎಸ್‍ಆರ್ ನಿಧಿಯನ್ನು ಸಂಗ್ರಹಿಸಲು ನಾವು ಕೆಲವು ಯೋಜನೆಯನ್ನು ಹೊಂದಿದ್ದೇವೆ. ಆ ನಿಧಿಗಾಗಿ ಇಲಾಖೆ ಕಾಯುತ್ತಿದೆ ಎಂದು ಅವರು ಹೇಳಿದರು.
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯವು ನಮ್ಮೊಂದಿಗೆ ಕೆಲಸ ಮಾಡಲು ಆಸಕ್ತಿಯನ್ನು ವ್ಯಕ್ತಪಡಿಸಿದ ಖಾಸಗಿ ವಲಯದ ಸಂಸ್ಥೆಗಳಲ್ಲಿ ಒಂದಾಗಿದೆ. 10 ಮತ್ತು 12ನೆ ತರಗತಿಯ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಕೋವಿಡ್ ಪೂರ್ವದ ಮಟ್ಟಕ್ಕಿಂತ ಉತ್ತಮಗೊಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.