ಬನ್ನೇರುಘಟ್ಟದ 114 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸುವಂತೆ ಒತ್ತಾಯ
ಬೆಂಗಳೂರು, ಆ.24: ಆರು ದಶಕಗಳ ಹೋರಾಟದ ಫಲವಾಗಿ ಸರಕಾರವು ನಗರದ ಹೊರವಲಯದ ಬನ್ನೇರುಘಟ್ಟದ ಬಳಿ ರಾಜ್ಯ ಅರಣ್ಯ ಪ್ರದೇಶದಲ್ಲಿ 114 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದು, ಇತರೆ ಜಿಲ್ಲೆಗಳಲ್ಲಿಯೂ ಇದೇ ಕ್ರಮವನ್ನು ಅನುಸರಿಸಬೇಕು ಎಂದು ಹಕ್ಕಿಪಿಕ್ಕಿ ಮತ್ತು ಇರುಳಿಗ ಆದಿವಾಸಿ ಸಂಘ ಒತ್ತಾಯಿಸಿದೆ.
ಗುರುವಾರ ಸಂಘದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಅಂತಾರಾಷ್ಟ್ರೀಯ ಬುಡಕಟ್ಟು ದಿನಾಚರಣೆಯ ಸಲುವಾಗಿ ಆ.12 ರಂದು ಹಮ್ಮಿಕೊಂಡಿದ್ದಂತಹ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಡಿ.ಕೆ ಸುರೇಶ್ ಸರಕಾರದಿಂದ ಗುರುತಿಸಲ್ಪಟ್ಟ 114 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ. ಇದು ಜೀವನೋಪಾಯ ಮತ್ತು ಮೂಲಭೂತ ಹಕ್ಕಿಗಾಗಿ ಹಲವು ವರ್ಷಗಳ ಹೋರಾಟಗಳಿಗೆ ಮೈಲುಗಲ್ಲಾಗಿದೆ ಎಂದರು.
ಅರಣ್ಯ ನಿವಾಸಿಗಳಾದ ಹಕ್ಕಿ ಪಿಕ್ಕಿ ಮತ್ತು ಇರುಳಿಗರವರ ಸಾಂಪ್ರದಾಯಿಕ ಜೀವನೋಪಾಯವನ್ನು ಬಲವಂತವಾಗಿ ತೊರೆಯುವಂತೆ ಮಾಡಿ ಸ್ಥಳಾಂತರ ಮಾಡಿದ ಹಲವು ವರ್ಷಗಳ ನಂತರ, ಈ ಜನಾಂಗಕ್ಕೆ 1962ರಲ್ಲಿ ಬನ್ನೇರುಘಟ್ಟದ ಅಂತಾರಾಷ್ಟ್ರೀಯ ಉದ್ಯಾನವನ ಅಂಚಿನಲ್ಲಿರುವ ರಾಜ್ಯ ಅರಣ್ಯ ಪ್ರದೇಶದಲ್ಲಿ 350 ಎಕೆರೆ ಭೂಮಿಯನ್ನು ಪುನರ್ವಸತಿ ಉದ್ದೇಶದಿಂದ ಡಿನೋಟಿಫೈಡ್ ಮಾಡಲಾಯಿತು. ಆದರೆ ಈ ಸಮುದಾಯದ ನಿರಂತರ ಭೂಮಿಯ ಹಕ್ಕನ್ನು ಪಡೆಯುವ ಹೋರಾಟವನ್ನು ಅರಣ್ಯ ಹಾಗೂ ಕಂದಾಯ ಇಲಾಖೆಯು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿತು ಎಂದರು.
ಸಂಸದ ಡಿ.ಕೆ ಸುರೇಶ್‍ರ ಚಿಂತನಶೀಲ ಹಾಗೂ ದೃಢ ನಿಲುವು ಕೇವಲ ಹಕ್ಕು ಪತ್ರಗಳ ವಿತರಣೆಯಲ್ಲದೆ ಕಂದಾಯಕ್ಕೆ ಸಂಬಂಧಪಟ್ಟಂತಹ ಎಲ್ಲ ದಾಖಲಾತಿಗಳಾದ ಖಾತಾ, ಭೂಮಿಯ ಪಟ್ಟ, ಮ್ಯುಟೇಷನ್ ಮತ್ತು ಪಾಣಿ ಪತ್ರಗಳ ಹಂಚಿಕೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಸಿಕ್ಕಿತು. ಈ ನಿಟ್ಟಿನಲ್ಲಿ ಹಕ್ಕಿ ಪಿಕ್ಕಿ ಮತ್ತು ಇರುಳಿಗ ಸಮುದಾಯದವರ ಪರವಾಗಿ ಸರಕಾರ ಕೈಗೊಂಡ ಪ್ರತಿಯೊಂದು ಹಂತವು ಆದರ್ಶ ಮಾದರಿಯಾಗುವುದು ಎಂದು ಹೇಳಿದರು.
ಮಂಜೂರಾದ ಭೂಮಿಯು ಕೇವಲ ವ್ಯವಸಾಯಕ್ಕಾಗಿ ಬಳುಸುವ ಉದ್ದೇಶಕ್ಕೆ ಮಂಜೂರು ಮಾಡಲಾಗಿದ್ದು, ಬರುವ ಮೂವತ್ತು ವರ್ಷಗಳ ಕಾಲ ಪರಭಾರೆ ಮಾಡತಕ್ಕದಲ್ಲ. ಮಂಜೂರಾದ ಭೂಮಿಯ ಸ್ವರೂಪವು ನಿಗಧಿತ ಕಾಲದವರೆಗೂ ಯಾವುದೇ ಕಾರಣಕ್ಕೂ ಬದಲಾಗಲು ಸಾಧ್ಯವಿಲ್ಲವೆನ್ನುವ ನೋಟೀಸ್‍ನ್ನು ಪಟ್ಟಣ ಮತ್ತು ನಗರ ಅಭಿವೃದ್ಧಿ ಇಲಾಖೆಗಳಿಗೆ ಕೊಡಲಾಗುವುದು ಎಂದು ಅವರು ಹೇಳಿದರು.
ಮಂಜೂರಾದ ಭೂಮಿಯಲ್ಲಿ ಫಲಾನುಭವಿಗಳು 10 ಗುಂಟೆಗೆ ಕಡಿಮೆ ಇಲ್ಲದಂತೆ ಒಂದು ಮರವನ್ನು ನೆಡತಕ್ಕದ್ದು. ಇದಲ್ಲದೇ, ಹಕ್ಕು ಪತ್ರಗಳನ್ನು ವಿತರಿಸುವ ಸಂದರ್ಭದಲ್ಲಿ ಡಿ.ಕೆ ಸುರೇಶ್ ಸಮಾಜ ಕಲ್ಯಾಣಕ್ಕೆ ಪತ್ರ ಬರೆದು ಭೂಮಿಯನ್ನು ಸುಸ್ಥಿರ ಮೂಲವನ್ನಾಗಿ ಮಾಡಲು ಎಲ್ಲ ರೀತಿಯ ನೆರವು ಸಮುದಾಯಕ್ಕೆ ಕೊಟ್ಟಿದ್ದಾರೆ ಎಂದು ಹೇಳಿದರು.