ಜನಪರ ಉದ್ದೇಶವಿಲ್ಲದ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ : ಡಿ.ಕೆ.ಶಿವಕುಮಾರ್
ಬೆಂಗಳೂರು : “ಜನಪರ ಉದ್ದೇಶ, ಅರ್ಥಗರ್ಭಿತ ಕಾರಣವಿಲ್ಲದ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,“ಎಸ್.ಎಂಕೃಷ್ಣ ಅವರು ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ದರು. ಭಾರತವನ್ನು ಒಂದುಗೂಡಿಸಲು, ಬೆಲೆ ಏರಿಕೆ, ನಿರುದ್ಯೋಗ ಖಂಡಿಸಿ, ಭ್ರಷ್ಟಾಚಾರ ವಿರುದ್ಧ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ್ದರು. ನಾವು ಗಣಿ ಲೂಟಿ ಖಂಡಿಸಿ ರಾಜ್ಯ ಹಾಗೂ ದೇಶದ ಸಂಪತ್ತು ರಕ್ಷಣೆಗೆ ಬಳ್ಳಾರಿ ಪಾದಯಾತ್ರೆ ಮಾಡಿದ್ದೆವು. ಕಾವೇರಿ ಜಲಾನಯನದ 10 ಜಿಲ್ಲೆಗಳಿಗೆ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ್ದೆವು” ಎಂದು ತಿಳಿಸಿದರು.
“ಈಗ ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆ ಸದ್ದಿದೆಯಾ? ಅವರ ಪಾದಯಾತ್ರೆಯ ವಿಚಾರವೇನು? ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾಗದೇ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಪಾದಯಾತ್ರೆಯಲ್ಲಿ ಬೇರೆ ಏನಾದರೂ ಮಹತ್ವದ ವಿಚಾರವಿದೆಯೇ?. ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆ ನೋಡುತ್ತಿದ್ದಾರೆ. ಅವರ ಪಾದಯಾತ್ರೆಗೆ ಜನರಿಂದ ಸ್ಪಂದನೆಯಿಲ್ಲ. ಪಾದಯಾತ್ರೆಯಲ್ಲಿ ಜನತಾದಳದ ಕಾರ್ಯಕರ್ತರೇ ಇಲ್ಲ. ಅವರು ಪಾದಯಾತ್ರೆಯಲ್ಲಿ ಹೊಡೆದಾಡಲಿ ಏನಾದರೂ ಮಾಡಿಕೊಳ್ಳಲಿ” ಎಂದು ತಿಳಿಸಿದರು.
ನನ್ನ ವಿರುದ್ಧದ ಕುಮಾರಸ್ವಾಮಿ ಆರೋಪಕ್ಕೆ ದಾಖಲೆ ಎಲ್ಲಿವೆ? :
“ಈಗ ಅವರ ಪಾದಯಾತ್ರೆ ವೇಳೆ ಬಿಜೆಪಿ ಕಾಲದಲ್ಲಿ ಆಗಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನಾವು ಕೇಳಿರುವ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ಕುಮಾರಸ್ವಾಮಿ ಅವರಿಗೆ ಪ್ರತ್ಯೇಕವಾಗಿ ಒಂದಷ್ಟು ಪ್ರಶ್ನೆ ಮಾಡಿದ್ದೇವೆ. ಅವರು ನನ್ನ ಬಗ್ಗೆ ನಮ್ಮ ಕುಟುಂಬದವರ ಬಗ್ಗೆ ಏನಾದರೂ ಟೀಕೆ ಮಾಡಲಿ. ಅವರು ನನ್ನ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ನಾನು ಅವರ ಸಹೋದರನ ಆಸ್ತಿ ಹೇಗೆ ಬಂತು, ಎಲ್ಲಿಂದ ಬಂತು ಎಂಬುದನ್ನು ಬಿಚ್ಚಿಡಬೇಕಲ್ಲವೇ? ನನ್ನ ಮೇಲೆ ಅವರು ಅನೇಕ ಆರೋಪ ಮಾಡುತ್ತಿದ್ದಾರೆ. ಆ ಆರೋಪಗಳಿಗೆ ದಾಖಲೆ ಬೇಕಲ್ಲವೇ? ಅವರ ಅಕ್ರಮಗಳ ಬಗ್ಗೆ ಮಾಧ್ಯಮಗಳೇ ವರದಿ ಮಾಡುತ್ತಿವೆಯಲ್ಲ” ಎಂದು ಕಿಡಿಕಾರಿದರು.
ನಮ್ಮನ್ನು ಒಳಗೆ ಹಾಕಿಸಲು ಪ್ರಯತ್ನ ನಡೆಯುತ್ತಿದೆ :
ದೇವೇಗೌಡರು ನಿನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, “ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಿಕೊಳ್ಳಲು ಅವರು ಹೋಗಲೇ ಬೇಕಲ್ಲವೇ?. ನಮ್ಮ ವಿರುದ್ಧ ದೂರು ನೀಡಿ, ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಒಳಗೆ ಹಾಕಲೇಬೇಕು ಎಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ನಾನು ಎಲ್ಲದಕ್ಕೂ ಸಿದ್ಧವಿದ್ದೇನೆ” ಎಂದು ತಿಳಿಸಿದರು.