ಸಿಎಂ ಹಾಗೂ ನನ್ನನ್ನು ಒಳಗೆ ಹಾಕಿಸಲು ಪ್ರಯತ್ನ ನಡೆಯುತ್ತಿದೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನನ್ನು ಒಳಗೆ ಹಾಕಿಸಲೇಬೇಕೆಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ಸವಾಲು ಹಾಕಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಿಕೊಳ್ಳಲು ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಗೆ ಹೋಗಲೇಬೇಕಲ್ಲವೇ?, ಹೀಗಾಗಿ ಹೋಗಿದ್ದಾರೆ. ಇದೇ ವೇಳೆ ನಮ್ಮ ವಿರುದ್ಧ ದೂರು ನೀಡಿ, ನಮ್ಮನ್ನು ಒಳಗೆ ಹಾಕಿಸಲು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯಪಾಲರ ನಡೆ ಏನೆಂದು ಕಾದು ನೋಡಬೇಕು: ಕುಮಾರಸ್ವಾಮಿ 2007ರಲ್ಲಿ ಸಿಎಂ ಆಗಿದ್ದಾಗ ಸಂಡೂರು 550 ಎಕರೆ ಅಕ್ರಮವಾಗಿ ಗಣಿಗಾರಿಕೆಗೆ ನೀಡಿದ ಬಗ್ಗೆ ರಾಜ್ಯಪಾಲರು ವಿಚಾರಣೆಗೆ ನೀಡಲು ಹಿಂದೇಟು ನೀಡುತ್ತಿದ್ದಾರೆಂಬ ಬಗ್ಗೆ ಮಾಧ್ಯಮ ವರದಿ ಬಂದಿದೆ ಎಂದು ಕೇಳಿದೆ. ನಾನು ಅದನ್ನು ನೋಡಿಲ್ಲ. ಆ ಪ್ರಕರಣದಲ್ಲಿ ಚಾರ್ಜ್‍ಶೀಟ್ ಆಗಿದೆ, ಸುಪ್ರೀಂ ಕೋರ್ಟ್‍ನಿಂದ ವಿಚಾರಣೆಗೆ ಬಂದಿದೆ, ಈ ಬಗ್ಗೆ ತನಿಖೆ ಮಾಡಲು ಹೇಳಿದ್ದರಂತೆ. ಸುಪ್ರೀಂ ಕೋರ್ಟ್ ವಿಚಾರಣೆ ನಂತರ ಲೋಕಾಯುಕ್ತ ತನಿಖೆ ಮಾಡಿ ಕುಮಾರಸ್ವಾಮಿ ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೇಳಿದರಂತೆ. ರಾಜ್ಯಪಾಲರು ಆ ಕಡತವನ್ನು ತಮ್ಮಲ್ಲೇ ಇರಿಸಿಕೊಂಡಿದ್ದಾರೆಂದು ನನಗೆ ಮಾಹಿತಿ ನೀಡಿದರು.
ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಪರಿಶೀಲಿಸಬೇಕು. ಜಂತಕಲ್ ಹಾಗೂ ಇತರೆ ಗಣಿ ವಿಚಾರವಾಗಿ ಕೆಲವರು ನನಗೆ ಮಾಹಿತಿ ಕಳುಹಿಸಿದ್ದು, ಅದನ್ನು ಸಂಪೂರ್ಣ ಪರಿಶೀಲಿಸಬೇಕಿದೆ. ಈ ವಿಚಾರವಾಗಿ ರಾಜ್ಯಪಾಲರು ಯಾವ ತೀರ್ಮಾನ ಮಾಡುತ್ತಾರೆ ಎಂದು ಕಾದುನೋಡೋಣ’ ಎಂದು ಅವರು ತಿಳಿಸಿದರು.
ಶುಭಗಳಿಗೆ ನೋಡಿ ದಾಖಲೆ ಬಿಡುಗಡೆ: ‘ಕುಮಾರಸ್ವಾಮಿ ಸಹೋದರನ ಆಸ್ತಿ ದಾಖಲೆ ಬಿಡುಗಡೆ ಖಂಡಿತವಾಗಿಯೂ ಮಾಡಲೇಬೇಕು. ಅದಕ್ಕೆ ಶುಭದಿನ, ಶುಭ ಗಳಿಗೆ, ಶುಭ ನಕ್ಷತ್ರ ನೋಡಿ ಬಿಡುಗಡೆ ಮಾಡಬೇಕು. ಅದಕ್ಕಿಂತ ಮುಂಚೆ ನಮ್ಮ ಬಗ್ಗೆ ಮಾಡುತ್ತಿರುವ ಆರೋಪಗಳ ಬಗ್ಗೆ ದಾಖಲೆ ಬಿಚ್ಚಿ ಎಂದು ಹೇಳಿದ್ದೇನೆ. ಸದನದಲ್ಲಿ ಚರ್ಚೆ ಮಾಡಲು ಆಹ್ವಾನ ಕೊಟ್ಟರೂ ಅವರು ಬರಲಿಲ್ಲ. ನಾನು ಸುಮ್ಮನೆ ಮಾತನಾಡಿದರೆ ಅದು ಒಂದೆರಡು ದಿನ ಸುದ್ದಿಯಾಗಿ ಮರೆಯಾಗುತ್ತದೆ. ಆದರೆ, ಸದನದಲ್ಲಿ ಚರ್ಚೆಯಾದರೆ ದಾಖಲೆಯಾಗಿ ಉಳಿದು ಮುಂದಿನ ತಲೆಮಾರಿನವರು ತಿಳಿಯಬಹುದು ಎಂದು ಹೇಳಿದರು.