ಕುಮಾರಸ್ವಾಮಿ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್
"ಮಗ ನಿಖಿಲ್ ಸೋಲಿನ ನಂತರ ಎಚ್ಡಿಕೆ ಮಾತು ಮಿತಿ ಮೀರಿದೆ"
ಎಚ್.ಡಿ.ಕುಮಾರಸ್ವಾಮಿ/ಡಿ.ಕೆ.ಶಿವಕುಮಾರ್
ಬೆಂಗಳೂರು: “ಕಳೆದ ಎರಡು ಮೂರು ವರ್ಷಗಳಿಂದ ಕುಮಾರಸ್ವಾಮಿ ಅವರ ಟೀಕೆಗಳನ್ನು ಸಹಿಸಿಕೊಂಡಿದ್ದೆ. ಮಗನ ಸೋಲಿನ ನಂತರ ಅವರ ಮಾತು ಮಿತಿ ಮೀರಿದೆ. ನಾನು ಎಷ್ಟು ದಿನ ಸಹಿಸಲಿ. ಅವರ ಹೇಳಿಕೆಗಳಿಗೆ ನಾನು ಉತ್ತರ ನೀಡಿದ್ದೇನೆ. ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅವರ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲೆಸೆದರು.
ಕುಮಾರಸ್ವಾಮಿ ಹಾಗೂ ಡಿಕೆಶಿ ನಡುವೆ ವೈಯಕ್ತಿಕ ನಿಂದನೆಗಳು ಹೆಚ್ಚುತ್ತಿವೆ ಎಂದ ಮಾಧ್ಯಮಗಳ ಪ್ರಶ್ನೆಗೆ ಸದಾಶಿವನಗರ ನಿವಾಸದಲ್ಲಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ““ಇದನ್ನು ಆರಂಭಿಸಿದ್ದು ಯಾರು? ಕುಮಾರಸ್ವಾಮಿ ಅವರು ಮೊದಲು ನನ್ನ ಬಗ್ಗೆ ಏನೆಲ್ಲಾ ಹೇಳಿದರು?. ಸಂಸತ್ ಚುನಾವಣೆ ಸೋತ ಬಳಿಕ ಕುಮಾರಸ್ವಾಮಿ ಏನ್ನೆಲ್ಲಾ ಮಾತನಾಡಿದ್ದಾರೆ ಎಂದು ಮಾಧ್ಯಮಗಳೇ ತೋರಿಸಲಿ. ಅವರು ಹೇಳಿರುವುದಕ್ಕೆ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಅವರ ಜತೆ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ಕಳೆದ ಎರಡು ಮೂರು ವರ್ಷಗಳಿಂದ ನಾನು ಬಹಳ ತಾಳ್ಮೆಯಿಂದ ಇದ್ದೆ. ಅವರನ್ನು ಅಣ್ಣ ಎಂದು ಸ್ವೀಕಾರ ಮಾಡಿದ್ದೆ. ಅವರು ಈ ರೀತಿ ಮಾತನಾಡಿದರೆ ನಾನು ಹೆದರಿ ಕೂರಲು ಸಾಧ್ಯವೇ? ಅಧಿಕಾರ ಬರುತ್ತದೆ, ಅಧಿಕಾರ ಹೋಗುತ್ತದೆ. ನನ್ನದು ಹೆದರಿ ಕೂರುವ ರಕ್ತವಲ್ಲ” ಎಂದರು.
“ಕುಮಾರಸ್ವಾಮಿ ಅವರು ನನಗೆ ಎಚ್ಚರಿಕೆ ಕೊಟ್ಟಿದ್ದಾರಲ್ಲ. ಇಂತಹ ಬೆದರಿಕೆಗೆ ಈ ಶಿವಕುಮಾರ್ ಹೆದರುವುದಿಲ್ಲ. ನನ್ನ ವಿರುದ್ಧ ಇರುವ ದಾಖಲೆ ಗೌಪ್ಯವಾಗಿ ಇರಬಾರದು. ಅದನ್ನು ಬಿಚ್ಚಿಡಲಿ. ಅವರ ಬುಟ್ಟಿಯಲ್ಲಿ ಹಾವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ವಿಧವೆಯರಿಗೆ ಗನ್ ಪಾಯಿಂಟ್ ನಲ್ಲಿಟ್ಟು ಈ ಆಸ್ತಿ ಬರೆಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹಾಗಿದ್ದರೆ ಅವರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ದೂರು ನೀಡಿ ಎಫ್ಐಆರ್ ದಾಖಲಿಸಲಿ” ಎಂದು ಸವಾಲೆಸೆದರು.
ಕುಮಾರಸ್ವಾಮಿ ಒಬ್ಬರೇ ಗಂಡಸು :
ಗಂಡಸ್ಥನ ಹಾಗೂ ನಪುಂಸಕ ರಾಜಕಾರಣದ ಬಗ್ಗೆ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ನಾನು ಗಮನಿಸಿಲ್ಲ. ಅವರೋಬ್ಬರೇ ಗಂಡಸು. ಅವರು ಈ ಹಿಂದೆ ಏನು ಮಾತನಾಡಿದ್ದಾರೆ ಒಮ್ಮೆ ನೋಡಿ. ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ. ಅಂದರೆ ನಾನು ಮತ್ತೆ ಜೈಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ನಾನು ಜೈಲು ನೋಡಿರುವವನು. ನಾನು ಜೈಲಲ್ಲಿ ಇದ್ದಾಗ ಅವರು ಬಂದು ನನ್ನ ನೋಡಿದ್ದರು. ಜೈಲಿನ ಒಳಗೆ ನಾನು ಎಷ್ಟು ಶಕ್ತಿಯಲ್ಲಿದ್ದೆ ಎಂದು ನೋಡಿದ್ದಾರೆ” ಎಂದರು ತಿರುಗೇಟು ನೀಡಿದರು.
ನಮ್ಮ ಸರಕಾರವನ್ನು ಮುಟ್ಟಲಿ ನೋಡೋಣ:
ಈ ಸರಕಾರ ತೆಗೆಯುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ಕುಮಾರಸ್ವಾಮಿ ಯಾವ ಆಧಾರದ ಮೇಲೆ 10 ತಿಂಗಳಲ್ಲಿ ಸರಕಾರ ಬೀಳಿಸುತ್ತೇವೆ ಎಂದಿದ್ದಾರೆ?. ಕುಮಾರಸ್ವಾಮಿ ಅವರ ಸರಕಾರವನ್ನೇ ಬಿಜೆಪಿಯವರು ಬೀಳಿಸಿದ್ದರಲ್ಲಾ ಅದರ ಬಗ್ಗೆ ಕುಮಾರಸ್ವಾಮಿಯವರು ಯಡಿಯೂರಪ್ಪ, ಅಶೋಕ್, ಅಶ್ವತ್ಥ್ ನಾರಾಯಣ ಅವರ ಬಗ್ಗೆ ಮಾತನಾಡುತ್ತಿಲ್ಲ?. ನಮ್ಮ ಸರಕಾರವನ್ನು ಹೇಗೆ 10 ತಿಂಗಳಲ್ಲಿ ತೆಗೆಯುತ್ತಾರೆ. ನಮ್ಮ ಸರಕಾರವನ್ನು ಮುಟ್ಟಲಿ ನೋಡೋಣ. ಹಿಂದುಳಿದ ನಾಯಕನೊಬ್ಬ ರಾಜ್ಯದಲ್ಲಿ ಜನರ ಆಶೀರ್ವಾದದೊಂದಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದೇ ಸರಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಾರಾ? ಎಂದು ಪ್ರಶ್ನಿಸಿದರು.
ಸಿಎಂ ರಾಜೀನಾಮೆ ಕೊಡುವ ಪ್ರಶ್ನೆ, ಪರಿಸ್ಥಿತಿ ಇಲ್ಲ :
ಸಿಎಂ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಸಿಎಂ ರಾಜೀನಾಮೆ ಕೊಡುವ ಪ್ರಶ್ನೆ, ಪರಿಸ್ಥಿತಿ ಇಲ್ಲ. ಇದು ರಾಜಕೀಯ ಷಡ್ಯಂತ್ರ. ಕುಮಾರಸ್ವಾಮಿ, ಯಡಿಯೂರಪ್ಪನವರಿಗೆ ಅಶೋಕ್, ವಿಜಯೇಂದ್ರ ಅವರಿಗೆ ಭ್ರಮೆ, ಹಗಲುಗನಸು ಕಾಣುತ್ತಿದ್ದಾರೆ. ಇದು ಸಾಧ್ಯವಿಲ್ಲ” ಎಂದು ತಿಳಿಸಿದರು.