ತುಂಗಭದ್ರಾ ಅಣೆಕಟ್ಟು ಗೇಟಿನ ದುರಸ್ತಿಗೆ ಉನ್ನತ ಮಟ್ಟದ ತಂತ್ರಜ್ಞರ ತಂಡ : ಡಿ.ಕೆ.ಶಿವಕುಮಾರ್
ಕೊಪ್ಪಳ : ತುಂಗಭದ್ರಾ ಅಣೆಕಟ್ಟಿನ ಹಾನಿಗೊಳಗಾದ 19ನೆ ಕ್ರೆಸ್ಟ್ ಗೇಟನ್ನು ದುರಸ್ತಿ ಮಾಡಲು ಅನುಭವವುಳ್ಳ ಉನ್ನತ ಮಟ್ಟದ ತಜ್ಞರನ್ನು ಕರೆಸುತ್ತಿದ್ದೇವೆ. ಈ ಘಟನೆ ಅತ್ಯಂತ ದುಃಖಕರ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ಜಲಾಶಯಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ನೀರಾವರಿ ನಿಗಮದಲ್ಲಿಯೂ ಉತ್ತಮ ತಂತ್ರಜ್ಞರಿದ್ದಾರೆ. ಅಲ್ಲದೆ, ಗುತ್ತಿಗೆದಾರ ಸಂಸ್ಥೆಗಳಾದ ಕೃಷ್ಣಯ್ಯ, ನಾರಾಯಣ ಹಾಗೂ ಹಿಂದುಸ್ಥಾನ್ ಸಂಸ್ಥೆಯ ತಂಡಗಳು ಈಗಾಗಲೇ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ತಂತ್ರಜ್ಞರಿಗೆ ಈಗಾಗಲೇ ಅಣೆಕಟ್ಟಿನ ವಿನ್ಯಾಸ ನಕ್ಷೆ ನೀಡಲಾಗಿದೆ ಎಂದು ಹೇಳಿದರು.
ಶನಿವಾರ ರಾತ್ರಿ ಜಲಾಶಯದ 10 ಗೇಟ್‍ಗಳನ್ನು ತೆರೆಲಾಗಿತ್ತು. ಏಕಾಏಕಿ ಜಲಾಶಯದ 19ನೆ ಗೇಟಿನ ಚೈನ್ ಲಿಂಕ್ ತುಂಡಾದ ಹಿನ್ನೆಲೆ ಎಲ್ಲ ಗೇಟ್ ತೆರೆದು ಅಣೆಕಟ್ಟಿನ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ. ಸದ್ಯ ಜಲಾಶಯದಿಂದ 98 ಸಾವಿರ ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ. 19ನೆ ಗೇಟ್ ಒಂದರಲ್ಲಿಯೇ 35ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರು ಭಯಪಡುವ ಅವಶ್ಯಕತೆ ಇಲ್ಲ ಎಂದು ಅವರು ಅಭಯ ನೀಡಿದರು.
ನೀರನ್ನು ಉಳಿಸುತ್ತೇವೆ: ಜಲಾಶಯದಿಂದ 60 ಟಿಎಂಸಿ ನೀರು ಖಾಲಿ ಮಾಡಬೇಕಿದೆ. ಗೇಟನ್ನು ಮತ್ತೆ ಹಾಕಬೇಕೆಂದರೆ ಒತ್ತಡ ಕಡಿಮೆ ಮಾಡಬೇಕಿದೆ. ಜಲಾಶಯದಲ್ಲಿ 150ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದು. ಜಲಾಶಯಕ್ಕೆ ಒಳಹರಿವು 28ಸಾವಿರ ಕ್ಯೂಸೆಕ್ಸ್ ಇದೆ. ಕನಿಷ್ಠ ನಮ್ಮ ರೈತರಿಗೆ ಒಂದು ಬೆಳೆಗಾದರೂ ಒದಗಿಸುವಷ್ಟು ನೀರನ್ನು ಉಳಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಅಣೆಕಟ್ಟಿನ ಪ್ರಮುಖ ಮೂರು ಕಾಲುವೆಗಳಿಗೆ ನೀರನ್ನು ಹರಿಸಲು 115 ಟಿಎಂಸಿ ನೀರಿನ ಅವಶ್ಯಕತೆ ಇದೆ. ಇದೆಲ್ಲವನ್ನು ಲೆಕ್ಕಾಚಾರ ಹಾಕಿ ರೈತರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನೆರೆ ರಾಜ್ಯಗಳಿಗೆ ಈಗಾಗಲೇ 25ಟಿಎಂಸಿ ನೀರನ್ನು ಕೊಡಲಾಗಿದೆ. ಇನ್ನೂ 90 ಟಿಎಂಸಿ ನೀರನ್ನು ಕೊಡಬೇಕಾಗಿದೆ. ಮೂರು ರಾಜ್ಯಗಳು ಒಟ್ಟಿಗೆ ಸೇರಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು.
ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಈ ಮೂರು ರಾಜ್ಯಗಳ ರೈತರಿಗೆ ಮುಖ್ಯವಾದ ಜಲಾಶಯ ಇದಾಗಿದೆ. ನಮ್ಮ ಕರ್ನಾಟಕದ 12ಲಕ್ಷ ಹೆಕ್ಟರ್ ಅಚ್ಚುಕಟ್ಟು ಪ್ರದೇಶವನ್ನು ಇದು ಹೊಂದಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಗಳು ಇದರಿಂದ ಲಾಭ ಪಡೆಯುತ್ತಿವೆ. ನಮ್ಮ ರೈತರು ಆತಂಕ ಪಡಬೇಕಾಗಿಲ್ಲ ಸರಕಾರ ನಿಮ್ಮ ಜೊತೆಗಿದೆ ಎಂದು ಅವರು ತಿಳಿಸಿದರು.