ಮುಡಾ ಪ್ರಕರಣದಲ್ಲಿ ನಮ್ಮ ಪಕ್ಷ ಸಿದ್ದರಾಮಯ್ಯರ ಬೆನ್ನಿಗೆ ನಿಲ್ಲಲಿದೆ: ಡಿ.ಕೆ. ಶಿವಕುಮಾರ್
ಡಿ.ಕೆ.ಶಿವಕುಮಾರ್ (File photo)
ಬೆಂಗಳೂರು: ‘ಮುಡಾ ಪ್ರಕರಣದಲ್ಲಿ ನಮ್ಮ ಪಕ್ಷ ಸಿದ್ದರಾಮಯ್ಯರ ಬೆನ್ನಿಗೆ ನಿಲ್ಲಲಿದೆ. ಅವರು ಅತ್ಯುತ್ತಮ ಆಡಳಿತ ನೀಡುತ್ತಿದ್ದು, ಬಿಜೆಪಿಯಿಂದ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಈ ಷಡ್ಯಂತ್ರ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಲ್ಲಿ ಎಲ್ಲೆಲ್ಲಿ ವಿರೋಧ ಪಕ್ಷಗಳ ಸರಕಾರ ಇದೆಯೋ ಅಲ್ಲೆಲ್ಲಾ ಷಡ್ಯಂತ್ರ ರೂಪಿಸಲಾಗುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೂರಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಈ ಹಿಂದೆ ನನ್ನ ಮೇಲೂ ಷಡ್ಯಂತ್ರ ರೂಪಿಸಿದ್ದರು. ನಾನು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದೆ. ಬಿಜೆಪಿ ಕಾಲದಲ್ಲಿನ ಅಕ್ರಮಗಳ ಬಗ್ಗೆ ಮಾಜಿ ಸಚಿವರು ಹಾಗೂ ಕೇಂದ್ರ ಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಅವರು ಮೊದಲು ಆ ನಾಯಕರ ವಿಚಾರದಲ್ಲಿ ತೀರ್ಮಾನ ಮಾಡಲಿ. ಆನಂತರ ಈ ವಿಚಾರವಾಗಿ ಆಗ್ರಹ ಮಾಡಲಿ’ ಎಂದು ತಿರುಗೇಟು ನೀಡಿದರು.
‘ಪ್ರತಿನಿತ್ಯ ನಾನು ಹೈಕಮಾಂಡ್ ನಾಯಕರ ಜತೆ ಸಂಪರ್ಕದಲ್ಲಿರುತ್ತೇನೆ. ನನ್ನ ಪಕ್ಷದ ಗ್ರಾಮ ಮಟ್ಟದ ನಾಯಕರಿಂದ ಹೊಸದಿಲ್ಲಿಯ ಮಟ್ಟದ ನಾಯಕರ ವರೆಗೂ ಎಲ್ಲರೊಂದಿಗೂ ಸಂಪರ್ಕದಲ್ಲಿರುತ್ತೇನೆ. ಅದರಲ್ಲಿ ಏನೂ ವಿಶೇಷವಿಲ್ಲ’ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.