ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡ ಎಂಬುದೆಲ್ಲಾ ಕೇವಲ ಊಹಾಪೋಹ: ಡಿಸಿಎಂ ಡಿ.ಕೆ. ಶಿವಕುಮಾರ್
"ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಅಪರಾಧದಲ್ಲೂ ಭಾಗಿ ಎನ್ನಲು ಸಾಧ್ಯವೇ?"

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ‘ನಟಿ ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡ ಎಂಬುದೆಲ್ಲಾ ಕೇವಲ ಊಹಾಪೋಹ. ಇದು ಬಿಜೆಪಿಯವರ ಗೇಮ್ ಪ್ಲಾನ್. ಯಾವ ಸಚಿವರ ಹೆಸರಿದೆ? ಯಾರಾದರೂ ನೋಡಿದ್ದಾರಾ? ಕೇಳಿದ್ದಾರಾ?’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳಿಗೆ ನಾವು ಹೋಗುತ್ತೇವೆ. ಅಲ್ಲಿ ಅನೇಕರು ನಮ್ಮ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಯಾರೋ ನನ್ನ ಪಕ್ಕ ಬಂದು ನಿಂತುಕೊಂಡ ತಕ್ಷಣ ನನಗೂ ಅವರಿಗೂ ಸಂಬಂಧ ಇದೆ ಎಂದು ಭಾವಿಸಲು ಸಾಧ್ಯವೇ?’ ಎಂದು ಕೇಳಿದರು.
ನಮ್ಮ ಜತೆ ಫೋಟೋ ತೆಗೆಸಿಕೊಂಡವರು ಅಪರಾಧ ಮಾಡಿದರೆ ನಾವು ಅದಕ್ಕೆ ಬೆಂಬಲ ನೀಡಿದ್ದೇವೆ ಎಂದು ಹೇಳಲು ಸಾಧ್ಯವೇ? ಇಂತಹ ಸಚಿವರು ಈ ರೀತಿಯಾಗಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟವಾಗಿ ಇದ್ದರೆ ನೀವು ಚರ್ಚೆ ಮಾಡಿ. ಯಾವುದೇ ಮಂತ್ರಿ ಅಪರಾಧ ಮಾಡಲು ಬೆಂಬಲ ನೀಡುವುದಿಲ್ಲ ಎಂದು ಅವರು ವಿವರ ನೀಡಿದರು.
ನಟಿ ರನ್ಯಾ ರಾವ್ ಪ್ರಕರಣದಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಸಿಎಂ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ನಾನು ಇತ್ತೀಚೆಗೆ ದುಬೈಗೆ ತೆರಳಿದ್ದೆ. ಆಗ ನನ್ನ ಉಂಗುರ, ಬೆಲ್ಟ್, ವಾಚ್ಗಳನ್ನು ತೆಗೆಸಿದ್ದರು. ಇಂತಹ ಭದ್ರತೆ ಮಧ್ಯೆ 14 ಕೆ.ಜಿ ಚಿನ್ನ ಕಳ್ಳಸಾಗಾಣೆ ಹೇಗೆ ಸಾಧ್ಯ ಎಂದು ನನಗೂ ಅಚ್ಚರಿಯಾಗಿದೆ ಎಂದು ಶಿವಕುಮಾರ್ ಹೇಳಿದರು.