ಬೆಂಗಳೂರಿನ ಅಭಿವೃದ್ದಿಗೆ ‘ಗ್ರೇಟರ್ ಬೆಂಗಳೂರು’ ವಿಧೇಯಕ ರಚನೆ : ಡಿ.ಕೆ.ಶಿವಕುಮಾರ್
ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಹಾಕಿದ್ದ ಗಡಿಯನ್ನು ಮೀರಿ ಬೆಳೆಯುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ವಿಧೇಯಕವನ್ನು ತರಲಾಗಿದ್ದು, ಸುಮಾರು 70 ಸಾವಿರ ಸಲಹೆಗಳನ್ನು ಕ್ರೋಢಿಕರಿಸುವ ಮೂಲಕ ಅಂತಿಮವಾದ ಬಿಲ್ ಅನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಬೆಂಗಳೂರು ಜಲಮಂಡಳಿಯಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 515ನೆ ಜಯಂತ್ಯೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬ್ರಾಂಡ್ ಬೆಂಗಳೂರು ಯೋಜನೆಯ ಅಡಿಯಲ್ಲಿ ಸ್ವೀಕೃತಿಯಾಗಿರುವ ಸಲಹೆಗಳನ್ನು ಚರ್ಚಿಸಿ ಗ್ರೇಟರ್ ಬೆಂಗಳೂರು ಬಿಲ್ ಸಿದ್ದಪಡಿಸಲಾಗಿದೆ ಎಂದರು.
ನೀರಿನ ದರದ ಬಗ್ಗೆ ಸದ್ಯದಲ್ಲೇ ಅಂತಿಮ ತೀರ್ಮಾನ: 12 ವರ್ಷಗಳಿಂದ ನೀರಿನ ದರವನ್ನು ಹೆಚ್ಚಿಸಲಾಗಿಲ್ಲ. ಇದರಿಂದ ಜಲಮಂಡಳಿಯ ಆರ್ಥಿಕ ಸ್ಥಿತಿಯ ಮೇಲೆ ಬಹಳಷ್ಟು ಒತ್ತಡ ಉಂಟಾಗಿದೆ. ಇದರ ಬಗ್ಗೆ ಸದ್ಯದಲ್ಲೇ ಸರಕಾರದ ಮಟ್ಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆರೆಗಳನ್ನು ಉಳಿಸಲು ಹಾಗೂ ಬೆಳೆಸಲು ಹೊಸ ಯೋಜನೆ: ಕರ್ನಾಟಕ ರಾಜ್ಯ ಕೆರೆ ಅಭಿವೃದ್ದಿ ಪ್ರಾಧಿಕಾರದ ಜೊತೆ ಸಭೆಯನ್ನು ನಡೆಸಿ, ನಗರ ಹಾಗೂ ಹೊರವಲಯ ವ್ಯಾಪ್ತಿಯಲ್ಲಿ ಇರುವಂತಹ ಕೆರೆಗಳನ್ನು ಬೆಂಗಳೂರು ಜಲಮಂಡಳಿ ವಶಕ್ಕೆ ತಗೆದುಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಇವುಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುವ ಮೂಲಕ ಕೆರೆಗಳನ್ನು ಉಳಿಸುವುದು ಹಾಗೂ ಅಂತರ್ಜಲವನ್ನು ಅಭಿವೃದ್ದಿಗೊಳಿಸುವುದು ನಮ್ಮ ಗುರಿಯಾಗಿದೆ ಎಂದರು.
ಸಿಬ್ಬಂದಿಗಳ ನೇಮಕಾತಿಗೆ ಕ್ರಮ: ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲದೇ ಇರುವ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಜಲಮಂಡಳಿಯಲ್ಲಿ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಅಧಿವೇಶನ ಮುಗಿದ ನಂತರ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾಣ ಕೈಗೊಳ್ಳಲಾಗುವುದು. ಸಿಬ್ಬಂದಿಗಳ ನೇಮಕಾತಿ ಹಾಗೂ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾವು ಬದ್ದರಾಗಿದ್ದೇವೆ ಎಂದು ಭರವಸೆ ನೀಡಿದರು.
ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.