ಡಿ.ಕೆ.ಶಿವಕುಮಾರ್ ಕಮಿಷನ್ ಕೇಳಿಲ್ಲ: ಕಾರ್ಯನಿರತ ಗುತ್ತಿಗೆದಾರರ ಸಂಘ ಸ್ಪಷ್ಟನೆ
ಬೆಂಗಳೂರು, ಆ.14: ‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಮಗಾರಿ ಬಿಲ್ ಪಾವತಿಗಾಗಿ ಯಾವುದೇ ಗುತ್ತಿಗೆದಾರರ ಬಳಿ ಕಮಿಷನ್ ಹಣವನ್ನು ಕೇಳಿಲ್ಲ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ತಿಳಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಕಾಮಗಾರಿಗಳ ಬಾಕಿ ಬಿಲ್‍ಗಳನ್ನು ಪಾವತಿ ಮಾಡುವಂತೆ ಸರಕಾರವನ್ನು ಒತ್ತಾಯಿಸಲಾಗಿತ್ತು. ಆದರೆ ಸರಕಾರ ಕಾಮಗಾರಿಗಳ ತನಿಖೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಕೆಲವು ರಾಜಕೀಯ ನಾಯಕ ಹಾಗೂ ರಾಜ್ಯಪಾಲರನ್ನು ಭೇಟಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.
ಸಾಲವನ್ನು ಮಾಡಿ ಗುತ್ತಿಗೆದಾರರು ಕಾಮಗಾರಿಗಳನ್ನು ನಡೆಸಿದ್ದಾರೆ. ಬಾಕಿ ಬಿಲ್ ಪಾವತಿಗಾಗಿ ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರವು ಬಿಲ್‍ಗಳನ್ನು ಪಾವತಿ ಮಾಡದೆ ತನಿಖೆಗೆ ಆದೇಶಿಸಿರುವುದು ಗುತ್ತಿಗೆದಾರರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ ಎಂದು ಅವರು ವಿವರಿಸಿದ್ದಾರೆ.
ಮಾಧ್ಯಮಗಳಲ್ಲಿ ಬಂದಂತ ಸುದ್ದಿಗಳಿಂದ ನಾವು ದಿಗ್ಭ್ರಾಂತರಾಗಿದ್ದೇವೆ. ಸರಕಾರದ ಮೇಲೆ ಮಾಡಿರುವ ಕಮಿಷನ್ ಆರೋಪದ ಹೇಳಿಕೆಯನ್ನು ಹಿಂಪಡೆಯುತ್ತೇವೆ. ಕಮಿಷನ್ ಆರೋಪ ಮಾಡಿರೋದು ಮಧ್ಯವರ್ತಿಗಳು ನಾವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.