ಮುನಿರತ್ನ ನೇತೃತ್ವದಲ್ಲಿ ಸೋಂಕು ಹರಡುವ ಜಾಲ : ಸಮಗ್ರ ತನಿಖೆಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಒತ್ತಾಯ
ಬೆಂಗಳೂರು : ಶಾಸಕ ಮುನಿರತ್ನ ನೇತೃತ್ವದಲ್ಲಿ ಏಡ್ಸ್ ಸೋಂಕನ್ನು ಅವರ ವಿರೋಧಿಗಳಿಗೆ ಹರಡಿಸುವ ಯತ್ನ ನಡೆದಿದೆ. ಅವರ ನೇತೃತ್ವದಲ್ಲಿ ಸೋಂಕನ್ನು ಹರಡಿಸುವ ಜಾಲವೇ ಸಕ್ರಿಯವಾಗಿದೆ. ಇದರ ವಿರುದ್ಧ ಸರಕಾರ ವಿಶೇಷ ತನಿಖೆ ನಡೆಸಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು.
ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ‘ಯಾರನ್ನೆಲಲ್ಲಾ ಬಳಸಿಕೊಂಡು ಸೋಂಕನ್ನು ಹರಡಿಸಲಾಗಿದೆ. ಈ ಜಾಲದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದು ತನಿಖೆ ಮೂಲಕ ಬಹಿರಂಗಗೊಳಿಸಬೇಕಿದೆ’ ಎಂದರು.
ರಾಜಕೀಯ ಬಣ್ಣ: ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಒಕ್ಕಲಿಗ, ದಲಿತ ಹಾಗೂ ಮಹಿಳಾ ಸಮುದಾಯದ ವಿರುದ್ದ ಶಾಸಕ ಮುನಿರತ್ನ ಅವಹೇಳನ ಮಾಡಿದ್ದಾರೆ. ಶಾಸಕರ ಅವಹೇಳನಕಾರಿ ಮಾತುಗಳು ಜಗಜ್ಜಾಹೀರಾಗಿದೆ. ಇದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ರಾಜಕೀಯಕ್ಕೂ ಹಾಗೂ ಮುನಿರತ್ನ ಮಾತಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.
ದೂರುದಾರರ ವಿರುದ್ಧ, ಸಮುದಾಯದ ಹೆಸರಿನಲ್ಲಿ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ. ದಲಿತ, ಒಕ್ಕಲಿಗ ಮತ್ತು ಮಹಿಳೆಯರನ್ನು ಬಹಳ ಕೀಳಾಗಿ ನೋಡಿದ್ದಾರೆ. ಇದು ರಾಜಕೀಯ ಪ್ರೇರಿತ ಪ್ರಕರಣವಲ್ಲ. ಅವರ ಮನಸ್ಸಿನ ಮಾತುಗಳು. ಈ ರೀತಿ ಮಾತನಾಡಿ ಎಂದು ನಾವು ಹೇಳಿಲ್ಲ. ಹೊಸದಾಗಿ ಮುನಿರತ್ನ ಮೇಲೆ ಅತ್ಯಾಚಾರ ಪ್ರಕರಣವೂ ದಾಖಲಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಸ್ಪಷ್ಟಪಡಿಸಲಿ. ಆ ನಂತರ ಇದಕ್ಕೆ ಸೂಕ್ತ ಉತ್ತರ ಕೊಡುತ್ತೇವೆ ಎಂದು ಹೇಳಿದರು.
‘ಈ ರೀತಿಯ ಕೃತ್ಯಗಳನ್ನು ನನ್ನ ರಾಜಕೀಯ ಜೀವನದಲ್ಲಿ ಕೇಳಿರಲೇ ಇಲ್ಲ. ವಿದೇಶದಲ್ಲಿ ಈ ರೀತಿಯ ಕೃತ್ಯಗಳು ನಡೆಯುವುದನ್ನು ಕೇಳಿದ್ದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ಇದರ ಮೂಲಕ ಬಿಜೆಪಿಯವರ ಬಣ್ಣವೂ ಬಯಲಾಗಬೇಕು. ಮುನಿರತ್ನ ಹಿಂದೆ ನಿಂತಿರುವ ಸಿ.ಟಿ.ರವಿ, ಆರ್.ಅಶೋಕ್ ಹಾಗೂ ಕುಮಾರಸ್ವಾಮಿ ಇದಕ್ಕೆ ಉತ್ತರ ನೀಡಬೇಕು. ಕಾಂಗ್ರೆಸ್ ನವರ ಮೇಲೆ ಈ ರೀತಿಯ ಅಸ್ತ್ರ ಪ್ರಯೋಗಿಸಿ ಎಂದು ಇವರುಗಳೇ ಕುಮ್ಮಕ್ಕು ನೀಡಿರಬಹುದು. ಈ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು ಎಂದರು.