ದೇಶವೆಂದರೆ ಕೇವಲ ಗುಜರಾತ್, ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ : ಡಿ.ಕೆ.ಸುರೇಶ್
"ಕೇಂದ್ರ ಸರಕಾರ ಕರ್ನಾಟಕಕ್ಕೆ ನ್ಯಾಯಯುತ ತೆರಿಗೆ ಪಾಲು ನೀಡಬೇಕು"

ಡಿ.ಕೆ.ಸುರೇಶ್
ಬೆಂಗಳೂರು : ‘ದೇಶವೆಂದರೆ ಕೇವಲ ಗುಜರಾತ್, ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಎಲ್ಲ ರಾಜ್ಯಗಳು ಸಮಾನಾಂತರ ಹಕ್ಕು ಹೊಂದಿವೆ. ಕೇಂದ್ರ ಸರಕಾರ ನಮ್ಮ ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು ನೀಡಬೇಕು’ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ.
ಶನಿವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರ ಪ್ರತಿಹಂತದಲ್ಲೂ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ಬಲಿಷ್ಠವಾದ ರಾಷ್ಟ್ರ ನಿರ್ಮಾಣ ಮಾಡಬೇಕಾದರೆ ರಾಜ್ಯಗಳಿಗೆ ಶಕ್ತಿ ತುಂಬಬೇಕು. ಆದರೆ ಕೇಂದ್ರ ರಾಜ್ಯಗಳ ಮೇಲೆ ಒಂದಲ್ಲ ಒಂದು ರೀತಿ ಕಾನೂನು ಹಾಗೂ ನಿಯಮಗಳನ್ನು ಹೇರುತ್ತಿದೆ ಎಂದು ದೂರಿದರು.
ತೆರಿಗೆ ವಿಚಾರದಲ್ಲಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ನಾನು ಈಗಾಗಲೇ ಪ್ರಸ್ತಾಪ ಮಾಡಿದ್ದು, ನಾವು ಎಷ್ಟು ತೆರಿಗೆ ಕಟ್ಟುತ್ತಿದ್ದೇವೆ. ಎಷ್ಟು ಪಾಲು ಅವರು ನೀಡುತ್ತಿದ್ದಾರೆ. ರಾಜ್ಯಗಳ ಅಭಿವೃದ್ಧಿ ಹೇಗೆ ಕುಂಠಿತವಾಗಿದೆ, ಕೇಂದ್ರ ಸರಕಾರ ನಮ್ಮ ರಾಜ್ಯಗಳನ್ನು ಯಾವ ದೃಷ್ಟಿಯಿಂದ ನೋಡುತ್ತಿದೆ ಎಂದು ಹೇಳಿದ್ದೇನೆ ಎಂದರು.
ಇನ್ನು ಹಿಂದಿ ಹೇರಿಕೆ ವಿಚಾರವೂ ರಾಜ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನ. ಆರ್ಥಿಕ ನೀತಿಯಲ್ಲಿ ಶೇ.1ರಷ್ಟು ತೆರಿಗೆ ಪಾಲು ಕಡಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ರಾಷ್ಟ್ರದ ಜನ ತಿರುಗಿ ಬಿದ್ದರೆ ಕಷ್ಟವಾಗುತ್ತದೆ. ಹೀಗಾಗಿ ಕೇಂದ್ರ ನಮ್ಮ ಪಾಲಿನ ತೆರಿಗೆ ಹಣ ನೀಡುವುದನ್ನು ಕಲಿಯಬೇಕು. ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದರು.
ಧ್ವನಿ ಎತ್ತಬೇಕು: ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ, ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ನಾನು ಈ ಹಿಂದೆಯೇ ಹೇಳಿದ್ದೇನೆ. ಈ ವರ್ಷ ಜನಗಣತಿ ನಡೆಯುವ ಸಾಧ್ಯತೆ ಇದ್ದು, ಮಹಿಳಾ ಮೀಸಲಾತಿ ಜಾರಿಯನ್ನು ಮಾಡಲಾಗುತ್ತಿದೆ. ಜನಸಂಖ್ಯೆ ಹಾಗೂ ಕ್ಷೇತ್ರ ವಿಂಗಡಣೆ ನೋಡಿದರೆ ದೇಶದ ವ್ಯವಸ್ಥೆ ಸಂಪೂರ್ಣವಾಗಿ ಉತ್ತರ ಭಾರತದ ಪಾಲಾಗಲಿದೆ. ದಕ್ಷಿಣ ಭಾರತದ ಮೇಲೆ ಕೇಂದ್ರ ತೋರುತ್ತಿರುವ ಮಲತಾಯಿ ಧೋರಣೆ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತಬೇಕು ಎಂದರು.