"ನಿಮ್ಮ ಮನೆ, ಮಕ್ಕಳಾಗಿ ನಾವು ಸೇವೆ ಮಾಡುತ್ತೇವೆ": ಸಿ.ಪಿ.ಯೋಗೇಶ್ವರ್ ಪರ ಡಿ.ಕೆ. ಸುರೇಶ್ ಮತಯಾಚನೆ
ಡಿ.ಕೆ.ಸುರೇಶ್
ಚನ್ನಪಟ್ಟಣ: ಈ ಕ್ಷೇತ್ರದಲ್ಲಿ ನೆಂಟರಂತೆ ಬಂದು ಎಲ್ಲ ಅಧಿಕಾರ ಅನುಭವಿಸಿ, ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದವರು ನೆಂಟರಂತೆ ಹೋಗಲಿ. ನಿಮ್ಮ ಮನೆ ಮಕ್ಕಳಂತೆ ನಾನು, ಸಿ.ಪಿ.ಯೋಗೇಶ್ವರ್, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸರಕಾರದ ಬೆಂಬಲದೊಂದಿಗೆ ನಿಮ್ಮ ಸೇವೆ ಮಾಡುತ್ತೇವೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಸೋಮವಾರ ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರಿನಲ್ಲಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.
ಕುಮಾರಸ್ವಾಮಿ ನಿಮ್ಮ ಆಶೀರ್ವಾದದಿಂದ ಎರಡನೇ ಬಾರಿಗೆ ವಿಧಾನಸೌಧಕ್ಕೆ ಪ್ರವೇಶ ಮಾಡಿದಾಗ ಏನು ಹೇಳಿದರು? ಶಾಸಕರಾಗಿ ಆಯ್ಕೆಯಾದ ನಂತರ ಐದು ವರ್ಷಗಳ ಕಾಲ ಜನರ ಮಧ್ಯೆ ಇರಬಾರದು, ನಿಮಗಾಗಿ ಕೆಲಸ ಮಾಡಬಾರದು. ಚುನಾವಣೆ ಸಮಯದಲ್ಲಿ ತಂತ್ರಗಾರಿಕೆ ಮಾಡಿ ಕಣ್ಣೀರು ಹಾಕಿ ಮತ ಕೇಳಿದರೆ ಸಾಕು ಎಂದು ಹೇಳಿದ್ದಾರೆ. ಇದು ಈ ತಾಲೂಕಿನ ಜನತೆಗೆ ಮಾಡಿರುವ ಅಪಮಾನ ಎಂದು ಅವರು ಟೀಕಿಸಿದರು.
ಇಂತಹ ಧೋರಣೆ ಹೊಂದಿರುವ ಕುಟುಂಬದ ಬಗ್ಗೆ ಚನ್ನಪಟ್ಟಣದ ಮತದಾರರು ತೀರ್ಮಾನ ಮಾಡಬೇಕು. ಅವರು ಹೇಳಿದಂತೆ ಕಳೆದ 8-10 ದಿನಗಳಿಂದ ಚುನಾವಣಾ ತಂತ್ರಗಾರಿಕೆ ಮಾಡಿಕೊಂಡು ಈಗ ಬಂದಿದ್ದಾರೆ. ಸಿದ್ದರಾಮಯ್ಯ ಹದಿನೈದು ದಿನಕ್ಕೊಮ್ಮೆ ಮೈಸೂರಿಗೆ ಹೋಗುತ್ತಾರೆ. ಡಿ.ಕೆ.ಶಿವಕುಮಾರ್ ಹದಿನೈದು ದಿನಕ್ಕೊಮ್ಮೆ ಕನಕಪುರಕ್ಕೆ ಹೋಗುತ್ತಾರೆ. ಕಾರಣ ಅವರಿಗೆ ತಮ್ಮ ಮತದಾರರ ಋಣ ತೀರಿಸುವ ಬದ್ಧತೆ ಇದೆ ಎಂದು ಸುರೇಶ್ ಹೇಳಿದರು.
ಕುಮಾರಸ್ವಾಮಿ ನನ್ನ ಹೇಳಿಕೆಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿದ್ದೀರಿ. ಯೋಗೇಶ್ವರ್ ಹಾಗೂ ನಾನು 30 ವರ್ಷಗಳ ಹಳೇ ಸ್ನೇಹಿತರು. ಆತ ನನ್ನ ಬೈಯ್ಯುತ್ತಾನೆ. ನಾನು ಆತನಿಗೆ ಬೈಯ್ಯುತ್ತೇನೆ. ನೀವು ಯಾರನ್ನು ಬೈದಿದ್ದೀರಿ ಗೊತ್ತಾ? ನೀವು ಮತದಾರರನ್ನು ನಿಂದಿಸಿದ್ದೀರಿ. ನಮ್ಮ ವಾಗ್ವಾದ ವೈಯಕ್ತಿಕವಾದುದ್ದು. ನೀವು ಟೀಕೆ ಮಾಡಿರುವುದು ನಿಮಗೆ ಆಶೀರ್ವಾದ ಮಾಡಿರುವ ಜನರಿಗೆ. ಇದಕ್ಕೆ ನೀವು ಉತ್ತರಿಸಿ ಎಂದು ಸುರೇಶ್ ಸವಾಲು ಹಾಕಿದರು.
ಯೋಗೇಶ್ವರ್ ಪಕ್ಷ ಬದಲಿಸುತ್ತಾರೆ ಎಂದು ಹೇಳುವ ಕುಮಾರಸ್ವಾಮಿ ಮಾಡುತ್ತಿರುವುದೇನು? ನಿಮಗೆ ಯಾರು ಅಧಿಕಾರ ನೀಡುತ್ತಾರೋ ಅವರ ಜತೆ ಕೈ ಜೋಡಿಸುತ್ತೀರಿ. ಇದರ ಹೊರತಾಗಿ ನಿಮ್ಮ ಬಳಿ ಯಾವ ಸಿದ್ಧಾಂತವಿದೆ? ಕುಮಾರಸ್ವಾಮಿ ಎಲ್ಲಾದರೂ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ? ಯೋಗೇಶ್ವರ್ ಈ ತಾಲೂಕಿಗೆ ನೀರು ನೀಡಿದ್ದಾರೆ. ನಾವು ವಿದ್ಯುತ್ ನೀಡಿದ್ದೇವೆ, ಗ್ಯಾರಂಟಿ ಯೋಜನೆ ನೀಡಿದ್ದೇವೆ ಎಂದು ಮತ ಕೇಳುತ್ತಿದ್ದೇವೆ. ಆದರೆ ಕುಮಾರಸ್ವಾಮಿ ತಮ್ಮ ಕೆಲಸದ ಬಗ್ಗೆ ಚರ್ಚೆ ಮಾಡಿ ಮತ ಕೇಳುತ್ತಿದ್ದಾರಾ? ಎಂದು ಅವರು ಪ್ರಶ್ನಿಸಿದರು.
ದೇವೇಗೌಡರೇ, ನಿಮ್ಮನ್ನು ಸಾಕಿ ಸಲುಹಿ ಪ್ರಧಾನಮಂತ್ರಿ ಸ್ಥಾನದವರೆಗೂ ಬೆಳೆಸಿದ ತಾಯಂದಿರ ಮಾನವನ್ನು ನಿಮ್ಮ ಮೊಮ್ಮಕ್ಕಳು ಹಾರಾಜು ಹಾಕುವಾಗ ಕಣ್ಣೀರು ಹಾಕಬೇಕಿತ್ತು. ನನ್ನ ಮೊಮ್ಮಕ್ಕಳು ತಪ್ಪು ಮಾಡಿದ್ದಾರೆ. ನನ್ನನ್ನು ಕ್ಷಮಿಸಿ ಎಂದು ಕೇಳಬೇಕಿತ್ತು. ಜೆಡಿಎಸ್ ಕಾರ್ಯಕರ್ತರ ಮನೆ ಹೆಣ್ಣು ಮಕ್ಕಳು, ಊಟಕ್ಕಾಗಿ ನಿಮ್ಮ ಮನೆಯಲ್ಲಿ ಕೂಲಿ ಮಾಡಿದವರ ಮೇಲೆ ಅತ್ಯಾಚಾರ ನಡೆದಾಗ ನೀವು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಂದ ತಪ್ಪಾಗಿದೆ ಎಂದು ಹೇಳಬೇಕಿತ್ತು ಎಂದು ಸುರೇಶ್ ತಿರುಗೇಟು ನೀಡಿದರು.
ಕಾಂಗ್ರೆಸ್ ನವರು ನನ್ನನ್ನು ಮೂರು ತಿಂಗಳು ಕೂಡಿಹಾಕಿದ್ದರು ಎಂದು ಹೇಳಿದ್ದೀರಿ. ನಾನು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೂಡಿಹಾಕಿದ್ದರೇ? ದೇವೇಗೌಡರೇ ನಿಮ್ಮನ್ನು ಕೂಡಿ ಹಾಕಿದ್ದು ಕಾಂಗ್ರೆಸ್ ನವರಲ್ಲ. ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು. ನಿಮ್ಮ ಮೊಮ್ಮಗ ಹಾಸನದಲ್ಲಿ ಅಪಚಾರ ಮಾಡಿದಾಗ ಒಂದು ದಿನ ಹೋಗಿ ಅಲ್ಲಿನ ಜನರ ಬಳಿ ಕ್ಷಮೆ ಕೇಳಲಿಲ್ಲ. ಇಲ್ಲಿ ಬಂದು 8 ದಿನಗಳಿಂದ ಚುನಾವಣಾ ಪ್ರಚಾರ ಮಾಡುತ್ತಿದ್ದೀರಲ್ಲಾ ನಿಮ್ಮ ನೈತಿಕತೆ ಎಲ್ಲಿ ಹೋಯಿತು? ಎಂದು ಅವರು ಪ್ರಶ್ನಿಸಿದರು.
ನಿಮ್ಮ ರಾಜಕಾರಣದ ವ್ಯವಸ್ಥೆಯಲ್ಲಿ ನೀವು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದರೆ ಇಂದು ರಾಜ್ಯದಲ್ಲಿ ಅತ್ಯುತ್ತಮ ಪ್ರಾದೇಶಿಕ ಪಕ್ಷ ಅಲ್ಲಾಡಿಸಲು ಸಾಧ್ಯವಾಗಿರುತ್ತಿರಲಿಲ್ಲ. ನಿಮ್ಮ ಮಕ್ಕಳ ಜತೆಗೆ ಬೆಳೆಯುವವರನ್ನು ಒಬ್ಬೊಬ್ಬರಾಗಿ ತುಳಿಯುತ್ತಾ ಬಂದಿರಿ. ಬಾಲಗಂಗಾಧರನಾಥ ಸ್ವಾಮೀಜಿಯನ್ನು ಬಿಡಲಿಲ್ಲ, ಇನ್ನು ಈ ಸಮಾಜದ ಬೇರೆಯವರನ್ನು ಬಿಡುತ್ತಾರಾ ಎಂದು ಸುರೇಶ್ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿದ ಸುರೇಶ್, ಕರ್ನಾಟಕದ ಭ್ರಷ್ಟಾಚಾರದ ಹಣವನ್ನು ಮಹಾರಾಷ್ಟ್ರ ಚುನಾವಣೆಯಲ್ಲಿ ಬಳಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೀಗೆ ಸುಳ್ಳು ಹೇಳಬಾರದು. ಜೊತೆಗೆ ಎಲ್ಲ ಏಜೆನ್ಸಿಗಳು ಅವರ ಕೈಯಲ್ಲಿವೆ, ಸೂಕ್ತ ದಾಖಲೆಗಳನ್ನು ನೀಡಿ ಆರೋಪವನ್ನು ಸ್ಪಷ್ಟಪಡಿಸಲಿ. ಕೇವಲ ಮಹಾರಾಷ್ಟ್ರ ಚುನಾವಣೆಗಾಗಿ ಪ್ರಧಾನಿಯಿಂದ ಈ ರೀತಿಯ ಆರೋಪವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.
ಮೋದಿ ಕರ್ನಾಟಕಕ್ಕೆ ಕಳೆದ ಹತ್ತುವರೇ ವರ್ಷಗಳಿಂದ ಯಾವ ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ತಿಳಿಸಲಿ. ಮಹಾದಾಯಿ ಯೋಜನೆಗೆ ಅನುಮತಿ ಕೊಡಿಸಿದ್ದಾರೆಯೇ? ಬೆಂಗಳೂರಿಗೆ ಯಾವ ಕೊಡುಗೆ ಕೊಟ್ಟಿದ್ದಾರೆ? ನಮಗೆ ಆಗುತ್ತಿರುವ ತೆರಿಗೆ ಅನ್ಯಾಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ? 4 ಲಕ್ಷ ಕೋಟಿ ರೂ.ನಮ್ಮ ತೆರಿಗೆಯನ್ನು ತೆಗೆದುಕೊಂಡು ಹೋಗಿ ಉತ್ತರ ಭಾರತದ ರಾಜ್ಯಗಳಿಗೆ ಕೊಡುತ್ತಿದ್ದಾರೆ. ಬಿಜೆಪಿಯವರು ಇದರ ಬಗ್ಗೆ ಉತ್ತರಿಸಲಿ ಎಂದು ಅವರು ಆಗ್ರಹಿಸಿದರು.