ಡಿಕೆಶಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ತಡೆಯಾಜ್ಞೆ ಮತ್ತೆ ವಿಸ್ತರಿಸಿದ ಹೈಕೋರ್ಟ್
ಬೆಂಗಳೂರು, ಜು.17: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ತನಿಖೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಮೂರು ವಾರಗಳ ಕಾಲ ವಿಸ್ತರಿಸಿ ವಿಚಾರಣೆ ಮುಂದೂಡಿದೆ.
ರಾಜ್ಯ ಸರಕಾರ ತಮ್ಮ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ)ದ ತನಿಖೆಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಿಬಿಐ ಪರ ವಕೀಲರು ಹಾಜರಾಗಿ, ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪುರಸ್ಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು. ಅಲ್ಲದೇ, ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ ಮಾಡಿ ಆದೇಶಿಸಿತು.
ಅರ್ಜಿದಾರರ ಪರ ವಕೀಲರು, ಸರಕಾರ ಅನುಮತಿ ನೀಡುವಾಗ ಸಹಜ ನ್ಯಾಯ ಪಾಲನೆ ಮಾಡಿಲ್ಲ. ಅನುಮತಿ ಆದೇಶದಲ್ಲಿ ಕಾರಣಗಳನ್ನು ತಿಳಿಸಿಲ್ಲ. ಇದು ನಿಯಮ ಬಾಹಿರ ಕ್ರಮ. ಅರ್ಜಿದಾರರು ಹಲವು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ. ಹೀಗಾಗಿ, ಅವರ ಮೇಲಿನ ದ್ವೇಷದಿಂದಾಗಿ ಸಿಬಿಐ ತನಿಖೆಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಅನುಮತಿ ಆದೇಶವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.
2019ರ ಸೆ.25ರಂದು ಸಿಬಿಐ ತನಿಖೆಗೆ ಅನುಮತಿ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ, ಡಿಕೆಶಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಈ ಎಫ್‍ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕೆಂದು ಕೋರಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಿಬಿಐ ತನಿಖೆಗೆ 2023ರ ಫೆ. 10ರಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇದೇ ವೇಳೆ ಡಿಕೆಶಿ, ಸರಕಾರದ ಅನುಮತಿ ಆದೇಶ ರದ್ದು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಅರ್ಜಿಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.