ʼಗೃಹಲಕ್ಷ್ಮಿʼ ಉದ್ಘಾಟನೆ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರಗೊಂಡಿದ್ದಕ್ಕೆ ಕಾರಣ ತಿಳಿಸಿದ ಡಿಕೆಶಿ
ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಗಸ್ಟ್ 30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಇಂದು (ಗುರುವಾರ) ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ರಮ ನಡೆಯಲಿರುವ ಸ್ಥಳದ ಪೂರ್ವ ಪರಿಶೀಲನೆ ನಡೆಸಿದ್ದಾರೆ.
ಇದಕ್ಕೂ ಮುನ್ನ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ʼʼಎಲ್ಲರ ಒಮ್ಮತದ ತೀರ್ಮಾನದಂತೆ ಮೈಸೂರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಗೊಂದಲವಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಲ್ಲಿ ಎರಡು ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆʼʼ ಎಂದು ಸ್ಪಷ್ಟಪಡಿಸಿದರು.
'ಮೈಸೂರಿನಲ್ಲಿ ಅನ್ನಭಾಗ್ಯ ಯೋಜನೆ ಕಾರ್ಯಕ್ರಮಕ್ಕೆ ಯೋಜಿಸಿದ್ದೆವು. ಆದರೆ, ಅಕ್ಕಿ ವಿಚಾರದಲ್ಲಿ ಒಂದಷ್ಟು ಅಡೆತಡೆ ಇವೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಇಲ್ಲಿಂದ ಆರಂಭಿಸುತ್ತಿದ್ದೇವೆ' ಎಂದು ತಿಳಿಸಿದರು.
ʼʼದೇಶದಲ್ಲಿಯೇ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ರಾಜ್ಯದಲ್ಲಿ 1.10 ಕೋಟಿ ಮಹಿಳೆಯರು ರಿಜಿಸ್ಟರ್ ಆಗಿದ್ದಾರೆ. ಆರ್ಥಿಕವಾಗಿ ಮಹಿಳೆಯರನ್ನು ಸದೃಢಗೊಳಿಸುವ ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ನಾ ನಾಯಕಿಯರು, ಕುಟುಂಬದ ಯಜಮಾನಿಯರು ತಮ್ಮ ವಿವರವನ್ನು ನೋಂದಾಯಿಸಿಕೊಂಡಿದ್ದಾರೆ. ಇದೇ 30ರಂದು ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ರಿಜಿಸ್ಟರ್ ಆಗಿರುವ ನಾ ನಾಯಕಿಯರಿಗೆ ಹಣ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲಿ, ಗೃಹಲಕ್ಷ್ಮಿ ಕಾರ್ಯಕ್ರಮವನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಉದ್ಘಾಟಿಸಲಿದ್ದಾರೆʼʼ ಎಂದು ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದರು.