ಯಾವುದೇ ವಿವಿ ಮುಚ್ಚುವ ಪ್ರಸ್ತಾವ ಸರಕಾರದ ಮುಂದೆ ಇಲ್ಲ : ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು: ‘ನೂತನ ವಿಶ್ವ ವಿದ್ಯಾಲಯಕ್ಕಾಗಿ ಹೋರಾಟ ಮಾಡುತ್ತಿರುವವರು, ಆ ವಿವಿಗಾಗಿ ಎಷ್ಟು ಹಣ ಕೊಟ್ಟಿದ್ದಾರೆಂದು ಹೇಳಬೇಕು. ಈ ವಿವಿಗೆ ಕೇಂದ್ರ ಸರಕಾರದಿಂದ ಅನುದಾನ ಕೊಡಿಸಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದ್ದಾರೆ.
ಮಂಗಳವಾರ ಬೆಂಗಳೂರು ವಿವಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಾವುದೇ ವಿವಿ ಮುಚ್ಚುವ ಪ್ರಸ್ತಾವ ಸರಕಾರದ ಮುಂದೆ ಇಲ್ಲ. ಈ ವಿವಿಗಳಿಗಾಗಿ ಬಿಜೆಪಿ ಸರಕಾರ ಕೇವಲ 2 ಕೋಟಿ ರೂ. ಹಣ ನಿಗದಿಪಡಿಸಿತ್ತು. 2 ಕೋಟಿ ರೂ.ಹಣದಲ್ಲಿ ವಿವಿ ಸ್ಥಾಪನೆ ಮಾಡಲು ಆಗುವುದಿಲ್ಲ. ಇದಕ್ಕೆ ನೂರಾರು ಎಕರೆ ಜಾಗ ಬೇಕು. ಬೆಂಗಳೂರು ವಿವಿ ಮಾಡುವ ವೇಳೆ 1,200 ಎಕರೆ ಜಮೀನು ಮೀಸಲಿಟ್ಟಿದ್ದರು. ಇದೀಗ ಅದರ ಅರ್ಧದಷ್ಟು ಜಾಗವನ್ನಾದರೂ ಮೀಸಲಿಡಬೇಕಲ್ಲ ಎಂದರು.
ಕೇವಲ ಹೆಸರಿಗಾಗಿ ವಿವಿ ಮಾಡಲು ಆಗುವುದಿಲ್ಲ. 20-30 ಕಾಲೇಜುಗಳಿಗೆ ಒಂದು ವಿವಿ ಮಾಡಲು ಸಾಧ್ಯವಿಲ್ಲ. ವಿಸಿ ಹುದ್ದೆಗಾಗಿ ವಿವಿ ಸ್ಥಾಪಿಸಲು ಆಗುವುದಿಲ್ಲ. ಈ ಹಿಂದೆ ಈ ಪ್ರಯತ್ನ ಮಾಡಲಾಗಿತ್ತು. ಮಂಡ್ಯ, ಕೊಡಗು ಭಾಗದ ಅನೇಕ ವಿದ್ಯಾರ್ಥಿಗಳು ನಮಗೆ ಮೈಸೂರು ವಿವಿಯ ಹೆಸರಿನಲ್ಲೇ ಓದಬೇಕು. ಡಾ.ರಾಧಾಕೃಷ್ಣ, ಕುವೆಂಪು ಅವರಿದ್ದ ಮೈಸೂರು ವಿವಿಯಲ್ಲಿ ಓದಿದರೆ ನಮಗೂ ಗೌರವವಿರುತ್ತದೆ. ಇನ್ನು ಸಿಬ್ಬಂದಿಗಳು ತಮ್ಮ ಹಿರಿತನ ವ್ಯರ್ಥವಾಗುತ್ತದೆ ಎಂದು ನೂತನ ವಿವಿಗೆ ಆಗಮಿಸಲು ಮುಂದಾಗುತ್ತಿಲ್ಲ ಎಂದು ಹೇಳಿದರು.
ನೂತನ ವಿವಿಗಳ ಅಧ್ಯಯನಕ್ಕೆ ಸಮಿತಿ ರಚಿಸಲಾಗಿತ್ತು. ಈ ಸಮಿತಿ ವರದಿ ನೀಡಿತ್ತು. ಇದಕ್ಕಾಗಿ ಸಂಪುಟ ಉಪ ಸಮಿತಿಯಲ್ಲಿ ನಾನು ಇದ್ದು ಚರ್ಚೆ ಮಾಡಿದ್ದೇನೆ. ಕೆಲವರು ರಾಜಕೀಯವಾಗಿ ಹೋರಾಟ ಮಾಡಬಹುದು. ನಮಗೆ ಮಕ್ಕಳ ವಿದ್ಯಾಭ್ಯಾಸ ಮುಖ್ಯ. ಇದಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಈ ಬಗ್ಗೆ ಚರ್ಚೆ ಮಾಡುತ್ತೇವೆ. ಈ ವಿಚಾರವಾಗಿ ಇನ್ನು ಯಾವುದೇ ಅಂತಿಮ ತೀರ್ಮಾನ ಮಾಡಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.
ಪ್ರತಿಭಟನೆ ಮಾಡುವವರು ಮಾಡುತ್ತಿರುತ್ತಾರೆ. ವಿವಿ ಮಾಡಿದ್ದೇವೆಂದು ಹೇಳುತ್ತಿರುವವರು ಆ ವಿವಿಗೆ ಎಷ್ಟು ಹಣ ನೀಡಿದ್ದರು ಎಂದು ಹೇಳಬೇಕಲ್ಲವೇ? 2 ಕೋಟಿ ರೂ.ಗಳಲ್ಲಿ ವಿವಿ ನಿರ್ಮಾಣ ಸಾಧ್ಯವೇ? ಆ 2 ಕೋಟಿ ರೂ.ಯೂ ಬಿಡುಗಡೆಯಾಗಿಲ್ಲ. ಪ್ರತಿಭಟನೆ ಮಾಡುತ್ತಿರುವವರು ಕೇಂದ್ರ ಸರಕಾರದಿಂದ ಅನುದಾನ ತಂದು ಕೊಟ್ಟರೆ ಅಗತ್ಯವಿರುವ ಜಾಗ ಖರೀದಿ ಮಾಡಿ ವಿವಿ ಸ್ಥಾಪನೆಗೆ ಕ್ರಮ ವಹಿಸಬಹುದು ಎಂದು ತಿಳಿಸಿದರು.