ಪಂಚೆಯುಟ್ಟ ರೈತನ ಪ್ರವೇಶಕ್ಕೆ ನಿರ್ಬಂಧ ಪ್ರಕರಣ | ರಾಜ್ಯದಲ್ಲಿ ಮಾಲ್‍ಗಳಿಗೆ ಹೊಸ ಮಾರ್ಗಸೂಚಿ : ಡಿ.ಕೆ.ಶಿವಕುಮಾರ್
ಬೆಂಗಳೂರು : ರಾಜ್ಯದಲ್ಲಿನ ಎಲ್ಲ ಮಾಲ್‍ಗಳು ಸೇರಿದಂತೆ ಯಾವುದೇ ಸ್ಥಳಗಳಿಗೆ ಭೇಟಿ ನೀಡುವವರ ನಿರ್ದಿಷ್ಟ ವಸ್ತ್ರಗಳಿಗೆ ನಿರ್ಬಂಧ ಹೇರದಂತೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿದ ಅವರು, ‘ಪಂಚೆ ನಮ್ಮ ಸಂಸ್ಕೃತಿ. ಇದಕ್ಕೆ ಪೂರಕವಾಗಿ ನಿಯಮ ತರಲಾಗುವುದು. ಇಡೀ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳು ನಡೆಯದಂತೆ ಅಗತ್ಯ ನಿಯಮಾವಳಿ ರೂಪಿಸಲಾಗುವುದು ಎಂದು ವಿವರಣೆ ನೀಡಿದರು.
ಮಾಲ್‍ಗೆ ಪಂಚೆ ಧರಿಸಿ ಬಂದ ರೈತನನ್ನು ತಡೆದ ವಿಚಾರವಾಗಿ ಇತ್ತೀಚಿಗೆ ವಿಧಾನಸಭೆಯಲ್ಲಿ ಪ್ರಸ್ತಾವನೆ ಮೇಲೆ ಚರ್ಚೆ ನಡೆಸಲಾಗಿತ್ತು. ಈ ವಿಚಾರವಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದ್ದರು. ನಾನು ಶುಕ್ರವಾರ ಗೈರಾಗಿದ್ದ ಕಾರಣ ಈಗ ನನ್ನ ಹೇಳಿಕೆ ನೀಡುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿನ ಜಿಟಿ ಮಾಲ್‍ಗೆ ಪಂಚೆ ಉಟ್ಟುಕೊಂಡು ಬಂದ ರೈತನಿಗೆ ಪ್ರವೇಶ ನೀಡದೆ ಇದ್ದ ಕಾರಣ ಮಾಲ್ ಮಾಲಕರಿಗೆ ಕಾರಣ ಕೇಳಿ ನೋಟಿಸ್ ನೀಡಿ, ತೆರಿಗೆ ಬಾಕಿ ಇದ್ದ ಕಾರಣ ಬೀಗ ಹಾಕಲಾಯಿತು. ಅವರು ಇದೀಗ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಅಲ್ಲದೆ, ಚೆಕ್ ಮುಖಾಂತರ ಬಾಕಿ ತೆರಿಗೆ ಪಾವತಿ ಮಾಡಿದ್ದಾರೆ ಎಂದು ಅವರು ಸದನಕ್ಕೆ ತಿಳಿಸಿದರು.
ಇದೇ ವೇಳೆ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ‘ಮಾಲ್‍ಗೆ ಒಂದು ವಾರ ಬೀಗ ಹಾಕಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವರು ಹೇಳಿದ್ದರು. ಬೀಗ ಹಾಕಿಸಿದ್ದೀರಾ? ಎಂದು ಪ್ರಶ್ನಿಸಿದರು. ಆಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಬೀಗ ಹಾಕಿಸಲಾಗಿತ್ತು ಎಂದರು.
ಮತ್ತೆ ಅಶೋಕ್ ಮಾತನಾಡಿ, ಮಾಲ್‍ಗಳಿಗೆ ಪರವಾನಗಿ ಕೊಡುವಾಗಲೇ ಗ್ರಾಮೀಣ ಭಾಗದ ಉಡುಪು ಧರಿಸಿದವರಿಗೆ ಅವಕಾಶ ನಿರಾಕರಿಸಬಾರದು ಎಂಬ ಷರತ್ತು ವಿಧಿಸಬೇಕು. ಸರಕಾರ ಜಮೀನು ಕೊಡುತ್ತದೆ. ಅನುಮತಿ ಕೊಟ್ಟಿರುವ ಕ್ಲಬ್‍ಗಳಿಗೂ ಇದು ಅನ್ವಯವಾಗಬೇಕು ಎಂದು ಒತ್ತಾಯಿಸಿದರು.
ಆಡಳಿತ ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಅಶೋಕ್ ಹೇಳಿದ್ದು ಸರಿಯಿದೆ. ಸರಕಾರದಿಂದಲೇ ಸುತ್ತೋಲೆ ಹೊರಡಿಸಬೇಕೆಂದು ಸಲಹೆ ನೀಡಿದರು. ಕೆಲವು ಕ್ಲಬ್ ಗಳಲ್ಲಿ ಪಂಚೆ ಹಾಕಿದ್ದರೆ, ಶೂ ಹಾಕದೆ ಇದ್ದರೆ ಒಳಗೆ ಬಿಡುವುದಿಲ್ಲ. ಇದರ ಬಗ್ಗೆಯೂ ಗಮನ ಹರಿಸಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮನವಿ ಮಾಡಿದರು.