ಚೈತ್ರಾ ಕುಂದಾಪುರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ವೈದ್ಯೆ ಅಸೀಮಾ ಬಾನು
ಬೆಂಗಳೂರು, ಸೆ.15: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ವಂಚಿಸಿರುವ ಪ್ರಕರಣ ಸಂಬಂಧ ಸಿಸಿಬಿ ಪೆÇಲೀಸರ ವಿಚಾರಣೆ ಎದುರಿಸುತ್ತಿರುವ ಆರೋಪಿತೆ ಚೈತ್ರಾ ಕುಂದಾಪುರ ಕುಸಿದು ಬಿದ್ದ ಹಿನ್ನೆಲೆಯಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ತಪಾಸಣೆ ಬಳಿಕ ಚೈತ್ರಾ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯೆ ಡಾ.ಅಸೀಮಾ ಬಾನು ತಿಳಿಸಿದ್ದಾರೆ.
ಶುಕ್ರವಾರ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತಂದ ಕೆಲವೇ ಕ್ಷಣಗಳಲ್ಲಿ ಚೈತ್ರಾ ಕುಸಿದುಬಿದ್ದಿದ್ದರು. ಬಾಯಲ್ಲಿ ನೊರೆ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಸೋಪಿನಪುಡಿ ಬಾಯಿಯಲ್ಲಿ ಹಾಕಿಕೊಂಡ ನೊರೆ ಬರಿಸಿಕೊಂಡು ಚೈತ್ರಾ ನಾಟಕ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಚೈತ್ರಾ ಅವರ ಆರೋಗ್ಯದ ಕುರಿತು ಬೆಂಗಳೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ.ಆಸೀಮಾ ಬಾನು ಮಾಹಿತಿ ನೀಡಿದ್ದು, ಬಿಪಿ, ಶುಗರ್ ಹಾಗೂ ಇಸಿಜಿ, ರಕ್ತಪರೀಕ್ಷೆ ಸೇರಿದಂತೆ ಅಗತ್ಯವಿರುವ ಎಲ್ಲ ರೀತಿಯ ಪರೀಕ್ಷೆ ನಡೆಸಲಾಗಿದೆ. ಎಲ್ಲವೂ ಸ್ಥಿರವಾಗಿದ್ದು, ಚೈತ್ರಾ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರಾಗಿಲ್ಲ. ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.
ಆರೋಪಿಗಳ ಬ್ಯಾಂಕ್ ಖಾತೆ, ಆಸ್ತಿ ಪರಿಶೀಲನೆ: ಈ ವಂಚನೆ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಆರೋಪಿಗಳು ಭಾಗಿಯಾಗಿರುವ ಆರೋಪವಿದ್ದು, ಚೈತ್ರಾ ಕುಂದಾಪುರ, ಗಗನ್ ಕಡೂರು, ರಮೇಶ್, ಧನರಾಜ್, ಚನ್ನಾ ನಾಯ್ಕ್, ಶ್ರೀಕಾಂತ್, ಪ್ರಜ್ವಲ್ ಎಂಬ ಏಳು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನುಳಿದಂತೆ, ಮೂರನೇ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಸೇರಿ ಕೆಲವು ಆರೋಪಿಗಳಿಗಾಗಿ ಸಿಸಿಬಿ ಶೋಧ ನಡೆಸುತ್ತಿದೆ. ಬಂಧಿತರ ವಿಚಾರಣೆ ನಡೆಸುತ್ತಿರುವ ಸಿಸಿಬಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ ಎಂದು ತಿಳಿದುಬಂದಿದೆ.
ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಕಳೆದ ಆರು ತಿಂಗಳಲ್ಲಿ ಇವರ ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ವಂಚನೆ ಹಣದಲ್ಲಿ ಆರೋಪಿಗಳು ಕಾರು, ಸ್ತಿರಾಸ್ಥಿ, ಚರಾಸ್ತಿ ಖರೀದಿಸಿರುವ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಂಧಿತರ ಮೊಬೈಲ್‍ಗಳನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದ್ದು, ಇಂದು ಅಥವಾ ನಾಳೆಯೊಳಗೆ ಮೊಬೈಲ್ ರಿಟ್ರೀವಲ್ ಆದ ಡೇಟಾ ತನಿಖಾಧಿಕಾರಿಗಳ ಕೈ ಸೇರುವ ಸಾಧ್ಯತೆಯಿದೆ.
ಬಂಧಿತರು 3.5 ಕೋಟಿ ರೂ. ಪಡೆದ ಸುಳಿವು!: ಸಿಸಿಬಿ ಸತತ ಮೂರನೇ ದಿನವಾದ ಶುಕ್ರವಾರ ತೀವ್ರ ವಿಚಾರಣೆಯನ್ನು ಕೈಗೊಂಡಿತ್ತು. ವಿಚಾರಣೆ ವೇಳೆ ಆರೋಪಿ ಚೈತ್ರಾ ಕುಂದಾಪುರ ಹಾಗೂ ಆಕೆಯ ಸಹಚರರು ಹಣ ಪಡೆದಿರುವ ಸತ್ಯ ಬಾಯಿಬಿಟ್ಟಿದ್ದಾರೆ. ಆದರೆ 5 ಕೋಟಿ ಬದಲಿಗೆ 3.5 ಕೋಟಿ ರೂ. ಪಡೆದಿರುವ ಬಗ್ಗೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.
ಇನ್ನು ಈ ಪ್ರಕರಣದಲ್ಲಿ 1.5 ಕೋಟಿ ರೂ. ಪಾಲು ಪಡೆದಿರುವ ಆರೋಪಕ್ಕೆ ಗುರಿಯಾಗಿರುವ ಹಿರೇಹಡಗಲಿ ಅಭಿನವ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದು, ಸಿಸಿಬಿ ಶೋಧ ನಡೆಸುತ್ತಿದೆ. ಆರೋಪಿಯ ಬೇನಾಮಿ ಆಸ್ತಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.