ತಮ್ಮ ಅಧಿಕಾರಾವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸದ ಬಿಜೆಪಿಗೆ ದೇಶದ ಬಗ್ಗೆ ಬದ್ಧತೆ ಇದೆಯೇ ? : ಡಿಸಿಎಂ ಡಿ.ಕೆ. ಶಿವಕುಮಾರ್
Photo: fb.com/dkshivakumar
ಹುಬ್ಬಳ್ಳಿ, ಮಾರ್ಚ್ 06: "ನಮ್ಮ ಸರ್ಕಾರದ ಅವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಬಿಜೆಪಿ ತನ್ನ ಅವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದಾಗ ತನಿಖೆಯೇ ನಡೆಸಲಿಲ್ಲ. ಅವರಿಗೆ ದೇಶದ ಬಗ್ಗೆ ಬದ್ಧತೆ ಇದೆಯಾ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬುಧವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಗ ಬಿಜೆಪಿ ಸರ್ಕಾರ ಅವರನ್ನು ಯಾಕೆ ಬಂಧನ ಮಾಡಲಿಲ್ಲ? ಬಿಜೆಪಿಯವರು ಕೇಸರಿ ಶಾಲು ಹಾಕಿ ಘೋಷಣೆ ಕೂಗಿದ್ದರು. ಈ ಪ್ರಕರಣಕ್ಕೆ ಯಾವುದೇ ಎಫ್ಎಸ್ಎಲ್ ವರದಿ ಅವಶ್ಯಕತೆ ಇಲ್ಲ. ನಾವು ರಾಜಕೀಯ ಮಾಡಬಾರದು ಎಂದು ಸುಮ್ಮನೆ ಇದ್ದೆವು. ಅವರ ಈ ಡೋಂಗಿ ಆಟಗಳನ್ನು ನೋಡಿ ನಮ್ಮ ಸ್ಥಳೀಯ ಶಾಸಕರು ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದರು.
ಪಾಕ್ ಪರ ಘೋಷಣೆ ಆರೋಪ ಪ್ರಕರಣದಲ್ಲಿ ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ನಾಯಕರ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, "ಅವರಿಗೆ ರಾಜೀನಾಮೆ ಯಾವಾಗ ಬೇಕಂತೆ? ಯಾರಿಗೆ ರಾಜೀನಾಮೆ ನೀಡಬೇಕೆಂದು ಕೇಳಿ. ರಾಜೀನಾಮೆ ಕೊಡೋಣ ಎಂದರು.
ಈಡಿ ಪ್ರಕರಣ ರದ್ದು ವಿಚಾರವಾಗಿ ದಾಗ, " ಮಾಧ್ಯಮಗಳು ಈಡಿ ದಾಳಿಯಾದಾಗ ಒಂದು ರೀತಿ, ಬಂಧನ ಆದಾಗ ಇನ್ನೊಂದು ರೀತಿ ತೋರಿಸುತ್ತವೆ. ಈಗ ನನ್ನ ವಿರುದ್ಧದ ಪ್ರಕರಣ ರದ್ದಾದ ಮೇಲೆ ಮಾಧ್ಯಮಗಳು ಸುಮ್ಮನಾಗಿವೆ" ಎಂದರು.
ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದಾಗ, "ಕೇವಲ ಇಬ್ಬರು ಮೂವರಲ್ಲ ಬಿಜೆಪಿಯಿಂದ ಅನೇಕ ಜನ ಕಾಂಗ್ರೆಸ್ ಗೆ ಆಗಮಿಸಲಿದ್ದಾರೆ" ಎಂದು ಹೇಳಿದರು.
ಶೀಘ್ರವೇ ಫ್ಲಡ್ ಗೇಟ್ ಓಪನ್ ಆಗುತ್ತೆ ಎಂಬ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ಬಗ್ಗೆ ಕೇಳಿದಾಗ, "ಈ ತಿಂಗಳು ಕಳೆದ ಮೇಲೆ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆ ಹೊರಬರಲಿದೆ" ಎಂದು ತಿರುಗೇಟು ನೀಡಿದರು.