ಮಕ್ಕಳೊಂದಿಗೆ ಈ ಸಲದ ಕನ್ನಡದ ʼಬಿಗ್ಬಾಸ್ʼ ನೋಡಬೇಡಿ: ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ ಸಲಹೆ
ಚಿತ್ರ ಕೃಪೆ- Kavya Shastryi@nstagram.com
ಬೆಂಗಳೂರು: ಸದ್ಯ ಕಲರ್ಸ್ ಕನ್ನಡದಲ್ಲಿ ಬಿಗ್ಬಾಸ್ ಸೀಸನ್ -10 ನಡೆಯುತ್ತಿದ್ದು, ಈ ನಡುವೆ ʼಮಕ್ಕಳೊಂದಿಗೆ ಈ ಸಲದ ʼಬಿಗ್ಬಾಸ್ʼ ಶೋ ನೋಡಬೇಡಿʼ ಎಂದು ʼಬಿಗ್ಬಾಸ್ʼ ನ ಮಾಜಿ ಸ್ಪರ್ಧಿಯೊಬ್ಬರು ಸಲಹೆ ಮಾಡಿದ್ದಾರೆ.
ಮಾಜಿ ಸ್ಪರ್ಧಿ ಕಾವ್ಯಾ ಶಾಸ್ತ್ರಿ ಎಂಬವರೇ ಈ ಸಲಹೆ ಮಾಡಿದ್ದು, ಅವರು ಬಿಗ್ ಬಾಸ್ ಸೀಸನ್- 4ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಇದೀಗ ಈ ಸಲದ ಕನ್ನಡದ ʼಬಿಗ್ಬಾಸ್ʼ ಶೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್ ನ್ಲಲೇನಿದೆ?
ʼʼಈ ಸಲದ ಕನ್ನಡದ ಬಿಗ್ಬಾಸ್ ಸೀಸನ್ ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣುಮಕ್ಕಳ ಮೇಲೆ ಏಕವಚನದ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರು ಧ್ವನಿಯಲ್ಲಿ ಗದರುವುದು, ಹೆದರಿಸುವುದು,ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ -ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಚಿಕ್ಕ ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ. ಹಾಗೂ, ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆʼʼ ಎಂದು ಸಲಹೆ ಮಾಡಿದ್ದಾರೆ.
ಮುಂದುವರಿದು ʼʼನಾನು ಯಾವುದೇ ಕಾರ್ಯಕ್ರಮದ ವಿರೋಧಿಯಲ್ಲ. ಇದು ಚಿಕ್ಕ ಮಕ್ಕಳಿರುವ ಪೋಷಕರಿಗೆ ಜಾಗೃತಿ ಮೂಡಿಸಲು ಮಾತ್ರ. ಯಾವುದೇ ಪ್ರದರ್ಶನವಾಗಲಿ, ಧಾರಾವಾಹಿಗಳು ಸಹ ವೀಕ್ಷಿಸಲು ಸೂಕ್ತವಾದ ವಯಸ್ಸಿನ ವರ್ಗದ ಬಗ್ಗೆ ಹಕ್ಕು ನಿರಾಕರಣೆಯೊಂದಿಗೆ ಬರುತ್ತವೆ. ಆದರೆ, ನಾವು ಅದನ್ನು ನಿರ್ಲಕ್ಷಿಸುತ್ತೇವೆ ಮತ್ತು ನಮ್ಮ ಮನೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನೋಡುತ್ತೇವೆ. ನಿಮ್ಮ ಮಗು ಪ್ರಜ್ಞಾಪೂರ್ವಕವಾಗಿ ಕುಳಿತು ನಕಾರಾತ್ಮಕ ವಿಷಯವನ್ನು ವೀಕ್ಷಿಸದಿದ್ದರೂ ಸಹ. ಕೇವಲ ಆಡಿಯೋ ಕೂಡ ಮಗುವಿನ ಮೇಲೆ ಪರಿಣಾಮ ಬೀರಬಹುದು. ದಯವಿಟ್ಟು ನಿಮ್ಮ ಶಕ್ತಿಗಳನ್ನು ಹಾಗೂ ನಿಮ್ಮ ಮಗುವಿನ ಬಗ್ಗೆ ಕಾಳಜಿ ವಹಿಸಿʼʼ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಸಾಕಷ್ಟು ವಿವಾದಕ್ಕೂ ಕಾರಣವಾಗಿದ್ದು, ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಸ್ಪರ್ಧಿ ವರ್ತೂರು ಸಂತೋಷ್ ರನ್ನು ಬಂಧಿಸಲಾಗಿತ್ತು. ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರನ್ನು ಮನೆಯಲ್ಲಿಯೇ ಬಂಧಿಸಿರುವ ಘಟನೆ ಇದಾಗಿತ್ತು.