ಜೋಡಿ ಕೊಲೆ ಪ್ರಕರಣ: ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್
ಬೆಂಗಳೂರು: ಜೋಡಿ ಕೊಲೆಯೊಂದರ ಪ್ರಕರಣದಲ್ಲಿ ಮೂರು ಮಂದಿ ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್ ರದ್ದುಪಡಿಸಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಅಪರಾಧಿಗಳಾದ ಬಾಬು, ಮತ್ತವರ ಸಹೋದರ ನಾಗಪ್ಪ, ಸಂಬಂಧಿ ಮುತ್ತಪ್ಪ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಮರಣ ದಂಡನೆ ಶಿಕ್ಷೆ ದೃಢೀಕರಿಸಲು ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಘಟನೆ ಸಂಬಂಧ ತಕ್ಷಣ ಪ್ರಚೋದನೆಗೊಳಗಾಗಿ ಕೊಲೆ ಮಾಡಲಾಗಿದೆ ಎಂಬುದಾಗಿ ಅರ್ಜಿದಾರರ ವಾದವನ್ನು ಹೈಕೋರ್ಟ್ ನ್ಯಾಯಪೀಠವು ತಿರಸ್ಕರಿಸಿದೆ. ಮೃತರ ನಡುವಿನ ಅಕ್ರಮ ಸಂಬಂಧ ಕೊಲೆಗಾರರಿಗೆ ತಿಳಿದಿತ್ತು. ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಕಷ್ಟು ಅವಕಾಶವಿತ್ತು. ಆದರೆ, ಆರೋಪಿಗಳು ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಪ್ರಕರಣ ಸಾಕ್ಷ್ಯಾಧಾರಗಳು ಇದೊಂದು ಪೂರ್ವಯೋಜಿತ ಕ್ರಮವಾಗಿದೆ ಎಂಬ ಅಂಶ ಬಹಿರಂಗ ಪಡಿಸುತ್ತಿದೆ. ಪ್ರಕರಣದ ಎಲ್ಲ ಆರೋಪಿಗಳು ಘಟನೆ ನಡೆದ ಸಂದರ್ಭದಲ್ಲಿ ಸಾವಿಗೀಡಾದ ಬಸವರಾಜು ಮತ್ತು ಅವರೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಸವಿತಾ(ಹೆಸರನ್ನು ಬದಲಾಯಿಸಲಾಗಿದೆ)ರನ್ನೇ ಮನೆಯಿಂದ ಹೊರಕ್ಕೆ ಎಳೆದು ತಂದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಬಾಬು ಎಂಬುವರು ಮನೆಯಿಂದ ಕುಡುಗೋಲು ತಂದಿದ್ದಾರೆ. ಈ ಬೆಳವಣಿಗೆಗಳು ಪೂರ್ವಯೋಜಿತ ಎಂಬುದನ್ನು ತಿಳಿಸುತ್ತವೇ ವಿನಹ ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಪೀಠ ವಿವರಿಸಿದೆ.
ಬಸವರಾಜು ಮತ್ತು ಸವಿತಾರ ಅಕ್ರಮ ಸಂಬಂಧದಿಂದ ಸವಿತಾರ ಪತಿಯಾಗಿರುವ ಬಾಬು ಸಾಕಷ್ಟು ನೊಂದಿದ್ದಾರೆ. ಜತೆಗೆ, ಒಬ್ಬನೇ ಆರೋಪಿ ಈ ಕೃತ್ಯ ನಡೆಸಿದ್ದಿದ್ದರೆ ಪ್ರಕರಣ ಭಿನ್ನವಾಗಿರುತ್ತಿತ್ತು. ಆದರೆ, ಅವನೊಂದಿಗೆ 2-4 ಜನ ಸೇರಿರುವುದು ಪ್ರಕರಣ ವಿಭಿನ್ನವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಪ್ರಸ್ತುತದ ಪ್ರಕರಣ ಅಪರೂಪದ ಪ್ರಕರಣವಲ್ಲ ಎಂದು ಅಭಿಪ್ರಾಯಪಟ್ಟು ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಾಯಿಸಿದೆ.
ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಮಮದಾಪಯರ ನಿವಾಸಿ ಬಾಬು ಎಂಬುವರ ಪತ್ನಿ ಸವಿತಾ ಅವರು ಬಸವರಾಜ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದ ಶಂಕಿಸಲಾಗಿತ್ತು. ಇದೇ ಕಾರಣದಿಂದ 2013ರ ಅ.10 ರಂದು ಬಾಬು ಮತ್ತವರ ಸಹೋದರ ನಾಗಪ್ಪ ಹಾಗೂ ಸಂಬಂಧಿಕರು ಸವಿತಾ ಮತ್ತು ಬಸವರಾಜು ಅವರನ್ನು ಕೊಲೆ ಮಾಡಿದ್ದರು.