ಇವಿಎಂ ಬದಲು ಬ್ಯಾಲೆಟ್ ಪೇಪರ್ ಸೂಕ್ತ : ಡಾ.ಜಿ.ಪರಮೇಶ್ವರ್ ಇಂಗಿತ
ಡಾ.ಜಿ.ಪರಮೇಶ್ವರ್
ಬೆಂಗಳೂರು : ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ತರುವುದು ಸೂಕ್ತ ಎಂಬುದು ನನ್ನ ಅನಿಸಿಕೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ರವಿವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಇವಿಎಂ ಬೇಡವೆಂದು ಹೇಳುತ್ತಿದ್ದೇವೆ. ಅಮೆರಿಕದಲ್ಲೂ ಇವಿಎಂ ಬೇಡ ಅನ್ನುತ್ತಾರೆ. ನಮ್ಮಲ್ಲಿ ಎಐಸಿಸಿ ಕೂಡ ಇವಿಎಂ ಬೇಡವೆಂದು ಒಂದು ಕಮಿಟಿ ಮಾಡಿದ್ದರು. ಇವಿಎಂ ತೆಗೆದು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡಬೇಕು ಎಂದರು.
ಮೊದಲೆಲ್ಲಾ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಯುತ್ತಿತ್ತು. ಏನು ಮಾಡಲಾಗಲ್ಲ ವ್ಯವಸ್ಥೆ ಅವರ ಕೈನಲ್ಲಿದೆ. ಅವರಲ್ಲೂ ಸಹ ಅನೇಕರು ಇವಿಎಂ ವಿರೋಧಿಸಿದ್ದಾರೆ. ಚುನಾವಣೆಯನ್ನು ನಂಬಿಕೆ ಬರುವ ರೀತಿ ಸೆಲೆಕ್ಟೀವ್ ಆಗಿ ಮಾಡುತ್ತಾರೆ. ಎಲ್ಲವನ್ನೂ ಹ್ಯಾಕ್ ಮಾಡಿದ್ದಾರೆ ಅಂತಲ್ಲ. ಕೆಲವೊಂದು ಕಡೆ ಹ್ಯಾಕ್ ಆಗಿರಬಹುದು ಎಂದು ಜಿ.ಪರಮೇಶ್ವರ್ ಅನುಮಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮೂರು ಕ್ಷೇತ್ರ ಗೆಲ್ಲುತ್ತೇವೆಂದು ಹೇಳಿದ್ದೆವು. ಸಿಎಂ, ಡಿಸಿಎಂ ಪಾತ್ರ ದೊಡ್ಡದಿದೆ. ಕಾರ್ಯಕರ್ತರು, ನಾಯಕರು ಎಲ್ಲಾ ಒಗ್ಗೂಡಿ ಕೆಲಸ ಮಾಡಿದ್ದಾರೆ. ಅದರಂತೆ ಮೂರು ಕ್ಷೇತ್ರ ಗೆದ್ದಿದ್ದೇವೆ ಎಂದು ಜಿ.ಪರಮೇಶ್ವರ್ ಹೇಳಿದರು.