‘ಒಳ ಮೀಸಲಾತಿ’ ನಮ್ಮ ಸರಕಾರವು ನುಡಿದಂತೆ ನಡೆಯಲಿದೆ : ಸಚಿವ ಎಚ್.ಸಿ.ಮಹದೇವಪ್ಪ ಭರವಸೆ
ಬೆಳಗಾವಿ : ‘ಪರಿಶಿಷ್ಟ ಜಾತಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಆಡಳಿತಾರೂಢ ಕಾಂಗ್ರೆಸ್ ಸರಕಾರ ಜಾರಿ ಮಾಡಲಿದ್ದು, ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ವಾಗ್ದಾನದಂತೆ ನುಡಿದಂತೆ ನಡೆಯಲಿದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದ್ದಾರೆ.
ಸೋಮವಾರ ಇಲ್ಲಿನ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್‍ನಲ್ಲಿ ‘ಮಾದಿಗ ದಂಡೋರ ಸಮಿತಿ’ ಸೇರಿದಂತೆ ವಿವಿಧ ಸಂಘಟನೆಗಳಿಂದ ನಡೆದ ಒಳ ಮೀಸಲಾತಿ ಜಾರಿ ಹೋರಾಟದ ಸಮಾವೇಶದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯಗಳು ತಮ್ಮನ್ನು ‘ಮಾದಿಗ ಮತ್ತು ಹೊಲೆಯ’ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಬೇಕು. ಪರಿಶಿಷ್ಟರ ಒಳ ಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಬದ್ಧವಾಗಿದ್ದು, ಈಗಾಗಲೇ ಅದನ್ನು ಸ್ಪಷ್ಟವಾಗಿ ಘೋಷಿಸಿದೆ.
ಆದರೆ, ಬಿಜೆಪಿ ಪಕ್ಷದ ನಾಯಕರು ಇದನ್ನು ರಾಜಕೀಯಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಇದರಿಂದ ಪರಿಶಿಷ್ಟ ಸಮುದಾಯಗಳಿಗೆ ಯಾವುದೇ ಪ್ರಯೋಜನ ಇಲ್ಲ. ಜನರನ್ನು ಮೆಚ್ಚಿಸಲು ಹಳೆಯ ವರದಿ ಮತ್ತು 2011ರ ಜನಗಣತಿಯ ದತ್ತಾಂಶ ತೆಗೆದುಕೊಂಡು ಮೀಸಲಾತಿ ಕೊಡಿ ಎಂದು ಸಲಹೆ ಕೊಡುತ್ತಿರುವ ಬಿಜೆಪಿಗರಿಗೆ 2011ರಿಂದ 2024ರ ಅವಧಿಯೊಳಗೆ ಪರಿಶಿಷ್ಟ ಸಮುದಾಯಗಳ ಜನಸಂಖ್ಯೆಯಲ್ಲಿ ಏರಿಕೆಯಾಗಿದ್ದರ ಕುರಿತು ಅರಿವಿಲ್ಲ ಎಂದು ತಿರುಗೇಟು ನೀಡಿದರು.
ಸುಮಾರು ಒಂದೂವರೆ ದಶಕದ ಅವಧಿಯಲ್ಲಿ ಆಗಿರುವ ಮಾರ್ಪಾಡುಗಳನ್ನು ಸೇರಿಸಿಕೊಳ್ಳದೇ ಪರಿಶಿಷ್ಟರ ಒಳ ಮೀಸಲಾತಿಯನ್ನು ಜಾರಿ ಮಾಡಿದರೆ ಮುಂದೊಮ್ಮೆ ಯಾರಾದರೂ ಪ್ರಶ್ನೆ ಮಾಡಿದರೆ ಆಗ ತೊಂದರೆ ಅನುಭವಿಸಬಾರದೆಂಬ ಉದ್ದೇಶದಿಂದಲೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯನ್ನು ರಚಿಸಲಾಗಿದೆ. ಅಂಬೇಡ್ಕರ್ ಹೇಳಿದಂತೆ ‘ರಾಜಕೀಯ ಅಧಿಕಾರವೇ ಶೋಷಿತರ ಅಭಿವೃದ್ಧಿಯ ಕೀಲಿ ಕೈ’. ಹೀಗಾಗಿ ಶೋಷಿತ ಸಮುದಾಯಗಳು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ನುಡಿದರು.
ಈ ಹೋರಾಟದಲ್ಲಿ ಚಿತ್ರದುರ್ಗದ ಮಾದರ ಚೆನ್ನಯ್ಯ ಗುರು ಪೀಠದ ಶ್ರೀ ಮಾದರ ಚೆನ್ನಯ್ಯ ಸ್ವಾಮೀಜಿ, ಷಡಕ್ಷರಿ ಮುನಿ ಸ್ವಾಮೀಜಿ, ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
‘ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸಿ 50 ದಿನಗಳಾದರೂ ಸರಕಾರವು ಅವರಿಗೆ ಒಂದು ಕಚೇರಿ ನೀಡಿಲ್ಲ, ಅವರಿಗೆ ಸೂಕ್ತ ವ್ಯವಸ್ಥೆಗಳನ್ನೂ ಮಾಡಿಕೊಟ್ಟಿಲ್ಲ. ಇಂತಹ ರಾಜ್ಯ ಸರಕಾರಕ್ಕೆ ತಮ್ಮ ಬೇಡಿಕೆಗಳಿಗೆ ನ್ಯಾಯ ಒದಗಿಸಿಕೊಡುವ ಮನಸ್ಥಿತಿ ಇದೆಯೇ? ಇಲ್ಲವೇ ಎಂಬ ಪ್ರಶ್ನೆಯನ್ನು ರಾಜ್ಯದ ಪ್ರತಿಯೊಬ್ಬರೂ ಕೇಳುತ್ತಿದ್ದಾರೆ’
-ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ