ಡಾ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲಿದ್ದಾರೆ: ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು
ಕಲಬುರಗಿ: ಈ ಭಾಗದ ಅಭಿವೃದ್ದಿಗೆ ಆರ್ಟಿಕಲ್ 371 (J) ತಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀವೆಲ್ಲರೂ ಆಶೀರ್ವಾದ ಮಾಡಿದರೆ ಅವರು ಪ್ರಧಾನಿಯಾಗಲಿದ್ದಾರೆ. ಚಿತ್ತಾಪುರದ ಅಭಿವೃದ್ದಿ ಪರ ಚಿಂತನೆಯುಳ್ಳ ನಾಯಕ ಪ್ರಿಯಾಂಕ್ ಖರ್ಗೆ ಅವರನ್ನ ನಾವು ರಾಜ್ಯ ಮಟ್ಟದ ನಾಯಕನನ್ನಾಗಿ ಬೆಳೆಸಿ ಸಿಎಂ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.
ಆಳಂದ ಪಟ್ಟಣದಲ್ಲಿ ನಡೆದ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡ ಅಂದಾಜು ಮೊತ್ತ ರೂ 800 ಲಕ್ಷ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂದಾಜು ಮೊತ್ತ ರೂ 625.95 ಲಕ್ಷ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ ಸಮಾಜದ ಎಲ್ಲ ವರ್ಗದ ಜನರ ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ ಇದು ಸಂತೋದಾಯಕ ಬೆಳವಣಿಗೆಯಾಗಿದೆ.
ಈ ಹಿಂದೆ ಇಲ್ಲಿ ಡಿಪ್ಲೋಮಾ ಹಾಗೂ ಡಿಗ್ರಿ ಕಾಲೇಜುಗಳಿರಲಿಲ್ಲ. ನಾನು ಒಂದು ಮಾದನಹಿಪ್ಪರಗಾ ಹಾಗೂ ಆಳಂದ ಪಟ್ಟಣಕ್ಕೆ ತಲಾ ಒಂದೊಂದು ಡಿಗ್ರಿ ಕಾಲೇಜು ಹಾಗೂ ಐಟಿಐ ಕಾಲೇಜು ಮಂಜೂರು ಮಾಡಿಸಿದೆ. ಆದರೆ ದುರ್ದೈವ ಸಂಗತಿ ಎಂದರೆ ಈ ಹಿಂದಿನ ಶಾಸಕರ ಕೊರಳಿ ಗ್ರಾಮದಲ್ಲಿ ಕಟ್ಟಿಸಿದ್ದಾರೆ ಇದು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ ಎನ್ನುವ ಅಭಿಪ್ರಾಯವಿದೆ. ಅಲ್ಲದೇ ಜ್ಯೂನಿಯರ್ ಕಾಲೇಜನ್ನು ರೂ 20 ಲಕ್ಷ ವೆಚ್ಚದಲ್ಲಿ ರಿಪೇರಿ ಮಾಡಿಸಿದೆ.
ಈ ವರ್ಷದಿಂದಲೇ ಪಾಲಿಟೆಕ್ನಿಕ್ ತರಗತಿಗಳು ಪ್ರಾರಂಭವಾಗಲಿ. ಕಾಲೇಜು ಮಂಜೂರಾಗಿದೆ. ಮುಂದಿನ 18 ತಿಂಗಳಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದ ಶಾಸಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಹಾಗೂ ಉದ್ಯೋಗ ಸಿಗಬೇಕು. ಆಳಂದ ಪಟ್ಟಣ ಹಿಂದುಳಿದ ತಾಲೂಕು ಇದ್ದು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ಇಲ್ಲಿ ಎಲ್ಲ ಜಾತಿ ಧರ್ಮದ ಜನರು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಕೆಲವರು ಸಮಾಜದ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಲೇ ಇರುತ್ತಾರೆ. ಇದರ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ಕ್ರಮ ಕೈಗೊಳ್ಳಲಿದ್ದಾರೆ.
ಸರ್ಕಾರದ ಯೋಜನೆಗೆ ಜಾಗದ ಕೊರತೆ ಎದುರಾಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಲ್ಯಾಂಡ್ ಬ್ಯಾಂಕ್ ಸ್ಥಾಪನೆ ಮಾಡಿ ಕನಿಷ್ಠ 100 ಎಕರೆ ಜಾಗ ಗುರುತಿಸಬೇಕು ಎಂದು ಅವರು ಸಲಹೆ ನೀಡಿದರು. ಲ್ಯಾಂಡ್ ಆರ್ಮಿಗೆ ವಹಿಸಿರುವ ಯಾವ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಖರ್ಗೆ ಅವರಿಗೆ ಮನವಿ ಮಾಡಿ ಗ್ರಾಮೀಣ ಭಾಗದ ರಸ್ತೆಗಳು ಕೆಟ್ಟುಹೋಗಿವೆ, ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಗೆ ಒತ್ತು ನೀಡಲಿ ಎಂದರು.
ಆಳಂದ ಪಟ್ಟಣಕ್ಕೆ ಕುಡಿಯುವ ನೀರು, ಕಬ್ಬಿನ ಕಾರ್ಖಾನೆಗಳ ಬಳಕೆಗೆ ನೀರು ಒದಗಿಸಲು ರೂ 350 ಕೋಟಿ ವೆಚ್ಚದಲ್ಲಿ ಭೀಮಾ ನದಿಯಿಂದ ಅಮರ್ಜಾ ಜಲಾಶಯಕ್ಕೆ ನೀರು ತರುವ ಯೋಜನೆಗೆ ತಂದಿದ್ದೇನೆ. ಆದರೆ 18 ತಿಂಗಳಲ್ಲಿ ಮುಗಿಯುವ ಕೆಲಸ ಆರು ವರ್ಷಗಳಾದರೂ ಮುಗಿದಿಲ್ಲ. ಈ ಬಗ್ಗೆ ಸಚಿವರು ಗಮನಿಸಬೇಕು ಎಂದರು.
ವೇದಿಕೆಯ ಮೇಲೆ ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಜಗದೇವ ಗುತ್ತೇದಾರ ಸೇರಿದಂತೆ ಹಲವರಿದ್ದರು.