ಡಾ.ರೇಣುಕಾ ಪ್ರಸಾದ್ ಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್
ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಕೊಲೆ ಪ್ರಕರಣ
ಡಾ.ರೇಣುಕಾ ಪ್ರಸಾದ್
ಮಂಗಳೂರು/ಸುಳ್ಯ, ಅ.5: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದ ಆರೋಪಿಗಳಾದ ಡಾ. ರೇಣುಕಾ ಪ್ರಸಾದ್ ಸಹಿತ ಐದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ರಾಜ್ಯ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.
ಪುತ್ತೂರಿನ ಐದನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಡಾ. ರೇಣುಕಾ ಪ್ರಸಾದ್ ಸಹಿತ ಏಳು ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಏಳು ವರ್ಷದ ಹಿಂದೆ ತೀರ್ಪು ನೀಡಿತ್ತು. ಅದರ ವಿರುದ್ಧ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಮತ್ತು ಮತ್ತು ಬಸವರಾಜ್ ಅವರಿದ್ದ ದ್ವಿಸದಸ್ಯ ನ್ಯಾಯ ಪೀಠವು ಪುರಸ್ಕರಿಸಿ ಪುತ್ತೂರು ನ್ಯಾಯಾಲಯದ ಆದೇಶವನ್ನು ಸೆ.27ರಂದು ರದ್ದುಗೊಳಿಸಿದ್ದರಲ್ಲದೆ ಏಳು ಮಂದಿಯ ಪೈಕಿ ಆರು ಮಂದಿ ಆರೋಪಿಗಳನ್ನು ದೋಷಿಗಳು ಎಂದು ತೀರ್ಮಾನಿಸಿ ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದ್ದರು.
ಅದರಂತೆ ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳಾದ ಸುಳ್ಯದ ಡಾ. ರೇಣುಕಾ ಪ್ರಸಾದ್, ವಿಟ್ಲ ಅಳಕೆಯ ಮನೋಜ್ ರೈ, ಸಕಲೇಶಪುರದ ನಾಗೇಶ್ ಎಚ್. ಆರ್., ವಾಮನ್ ಪೂಜಾರಿ, ಬಜಾಲ್ನ ಶಂಕರ್ ಯಾನೆ ಭವಾನಿ ಶಂಕರ್ ಹಾಗೂ ತಲೆ ಮರೆಸಿಕೊಂಡಿರುವ ಶರಣ್ ಪೂಜಾರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಇನ್ನೋರ್ವ ಅರೋಪಿ ಎಚ್.ವಿ. ನಾಗೇಶ್ನನ್ನು ಖುಲಾಸೆಗೊಳಿಸಲಾಗಿದೆ.
ತಲೆ ಮರೆಸಿಕೊಂಡಿರುವ ಐದನೇ ಆರೋಪಿ ಶರಣ್ ಪೂಜಾರಿ ಬಂಧನಕ್ಕೆ ವಾರೆಂಟ್ ಹೊರಡಿಸುವಂತೆ ಪುತ್ತೂರು ಸತ್ರ ನ್ಯಾಯಾಲಯಕ್ಕೆ ಸೂಚಿಸಿದೆ.
ಅಲ್ಲದೇ, ಪ್ರಮುಖ ಆರೋಪಿ ಡಾ.ರೇಣುಕಾ ಪ್ರಸಾದ್ಗೆ 10 ಲಕ್ಷ ರೂ. ದಂಡವನ್ನು ವಿಧಿಸಲಾಗಿದ್ದು, ಅದನ್ನು ಕೊಲೆಗೀಡಾದ ಪ್ರೊ.ಎ.ಎಸ್. ರಾಮಕೃಷ್ಣ ಅವರು ಕುಟುಂಬಕ್ಕೆ ನೀಡುವಂತೆ ಆದೇಶಿಸಲಾಗಿದೆ.
*ಪ್ರಕರಣದ ವಿವರ: 2011ರ ಎಪ್ರಿಲ್ 28ರಂದು ರಾತ್ರಿ 7:45ಕ್ಕೆ ಸುಳ್ಯದ ಅಂಬಟೆಡ್ಕ ಬಳಿಯ ಶ್ರೀ ಕೃಷ್ಣ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ರಸ್ತೆಯಲ್ಲಿ ತನ್ನ ಪುತ್ರನ ಜೊತೆ ವಾಕಿಂಗ್ ಹೊರಟಿದ್ದ ಪ್ರೊ.ಎ.ಎಸ್.ರಾಮಕೃಷ್ಣ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ತಲವಾರಿನಿಂದ ಕೊಚ್ಚಿ ಕೊಲೆಗೈದಿದ್ದರು. ಘಟನೆಗೆ ಸಂಬಂಧಿಸಿ ಸುಳ್ಯ ಠಾಣೆಯಲ್ಲಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
ವಾದ-ಪ್ರತಿವಾದ ಆಲಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿದೆ ಎಂಬ ತೀರ್ಮಾನಕ್ಕೆ ಬಂದು 2016ರ ಅಕ್ಟೋಬರ್ 21ರಂದು ಪ್ರಕರಣದ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ರಾಜ್ಯ ಸರಕಾರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.
ಹೈಕೋರ್ಟ್ ಸೆ.27ರಂದು ಪುತ್ತೂರು ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ಏಳು ಮಂದಿಯ ಪೈಕಿ ಆರು ಮಂದಿ ದೋಷಿಗಳು ಮತ್ತು ಓರ್ವ ನಿರ್ದೋಷಿ ಎಂದು ಆದೇಶಿಸಿತ್ತು. ಅಲ್ಲದೆ ಅ.5ರ ಗುರುವಾರ ನ್ಯಾಯಾಲಯಕ್ಕೆ ಶರಣಾಗಲು ಆರೋಪಿಗಳಿಗೆ ಸೂಚನೆ ನೀಡಿತ್ತು.
ಅದರಂತೆ ಆರೋಪಿಗಳು ಪ್ರಕರಣದ ವಿಚಾರಣೆ ನಡೆದಿದ್ದ ಪುತ್ತೂರಿನ ಐದನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಬೇಕಿತ್ತು. ಆದರೆ ನ್ಯಾಯಾಧೀಶರು ರಜೆಯಲ್ಲಿದ್ದ ಕಾರಣ ಪ್ರಭಾರದಲ್ಲಿರುವ ಆರನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಬೇಕಾಯಿತು. ಆದರೆ ಆರೋಪಿ ಆಕಾಶಭವನ ಶರಣ್ ಎಂಬಾತನನ್ನು ಹೊರತುಪಡಿಸಿ ಉಳಿದ ಐವರು ಗುರುವಾರ ಅಪರಾಹ್ನ 2:30ಕ್ಕೆ ಮಂಗಳೂರಿನ ಆರನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಹಾಜರಾದರು. ವೀಡಿಯೋ ಕಾನ್ಪರೆನ್ಸ್ ಮೂಲಕ ಅಹವಾಲು ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ಐದು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ರೌಡಿಶೀಟರ್ ಆಕಾಶಭವನದ ಶರಣ್ ಎಂಬಾತ ಗುರುವಾರ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದಾನೆ. ಉಳಿದ ಐವರು ಆರೋಪಿಗಳ ಉಪಸ್ಥಿತಿಯಲ್ಲಿ ಶಿಕ್ಷೆ ಪ್ರಮಾಣ ಘೋಷಿಸಲಾಯಿತು.
ಆರೋಪಿಗಳ ಪರವಾಗಿ ವಾದಿಸಿದ್ದ ನ್ಯಾಯವಾದಿ ಶಾಂತರಾಮ ಶೆಟ್ಟಿ ಶಿಕ್ಷೆ ಪ್ರಕಟನೆಯ ಸಂದರ್ಭ ನ್ಯಾಯಾಲಯದಲ್ಲಿ ಹಾಜರಿದ್ದು, ರೇಣುಕಾ ಪ್ರಸಾದ್ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
- ಪ್ರೊ.ಎ.ಎಸ್.ರಾಮಕೃಷ್ಣ