ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ನೀಡಲು ಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ಕೊಪ್ಪಳದಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದ್ದು, ಈ ದುರಂತ ಆಗಬಾರದಿತ್ತು. ಇಂತಹದ್ದೆಲ್ಲಾ ನಡೆದಾಗ ಪ್ರವಾಸಿಗರು ಬರಲು ಹಿಂಜರಿಕೆ ಉಂಟಾಗುತ್ತದೆ. ನಾವು ಈಗಾಗಲೇ ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಸುರಕ್ಷತೆ ನೀಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ರವಿವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳದ ಪ್ರಕರಣ ಸಂಬಂಧ ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಮಾ.8ರಂದು ಬಂಧಿಸಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳಾದ ಮಲ್ಲೇಶ, ಚೇತನ್ ಗಂಗಾವತಿಯವರು. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಮಾದಕ ವಸ್ತುಗಳ ಬಳಕೆ ಕಂಡುಬಂದಿಲ್ಲ. ಆಕಾಶದಲ್ಲಿನ ನಕ್ಷತ್ರ ವೀಕ್ಷಣೆಗೆ ಯಾರಿಗೂ ಹೇಳದೇ ಪ್ರವಾಸಿಗರು ಹೋಗಿದ್ದಾರೆ. ಅದು ನಿರ್ಜನ ಪ್ರದೇಶವಾಗಿತ್ತು. ಈ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ಮೋಟಾರ್ ಬೈಕಿನಲ್ಲಿ ಅಲ್ಲಿಗೆ ಬಂದು, ಪೆಟ್ರೋಲ್ ಸಿಗುತ್ತಾ ಎಂದು ಕೇಳಿ ಬಳಿಕ ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಈ ಪ್ರಕರಣದಲ್ಲಿ ಮೂರನೇ ಆರೋಪಿ ಸಿಕ್ಕಿಲ್ಲ. ಶೋಧ ನಡೆಯುತ್ತಿದೆ. ಆರೋಪಿಗಳ ತಳ್ಳಿದ್ದರಿಂದ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಓರ್ವ ಪ್ರವಾಸಿಗನ ಮೃತದೇಹ ಸಿಕ್ಕಿದೆ. ವಿದೇಶಿ ಪ್ರವಾಸಿಗರಿಗೆ ಚಿಕಿತ್ಸೆ, ನೆರವು, ಅವರ ದೇಶದ ರಾಯಭಾರ ಕಚೇರಿಗೆ ತಿಳಿಸುವ ಕೆಲಸವಾಗುತ್ತಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.