ಕುಡಿಯುವ ನೀರಿನ ಸಮಸ್ಯೆ ; ಖಾಸಗಿ ಕೊಳವೆ ಬಾವಿಯನ್ನು ಬಾಡಿಗೆಗೆ ಪಡೆದು ನೀರು ಪೂರೈಕೆ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಬೇಸಿಗೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದು, ಅಗತ್ಯವಿರುವ ಕಡೆಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆದು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಬರ ಸ್ಥಿತಿ ನಿರ್ವಹಣೆ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬರದ ಸಮಯದಲ್ಲಿ ಕೊಳವೆ ಬಾವಿ ಕೊರೆಸಿದರೂ ಪ್ರಯೋಜನವಾಗುತ್ತಿಲ್ಲ. ಅಂತರ್ಜಲ ಬತ್ತಿದ್ದು, ಹೊಸ ಕೊಳವೆಬಾವಿಗಳು ವಿಫಲವಾಗುವ ಸಾಧ್ಯತೆಯಿದೆ. ಹೀಗಾಗಿ ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆಯುವುದು ಅನಿವಾರ್ಯ ಎಂದು ಹೇಳಿದರು.
ರಾಜ್ಯದ 116 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸದ್ಯಕ್ಕೆ 170 ಟ್ಯಾಂಕರ್ ಮೂಲಕ ಆ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗಿದೆ. ಬೆಂಗಳೂರು ನಗರದ 57 ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಈ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗುವ ಸಂಭವವಿದೆ. ರಾಜ್ಯದ 7,377 ಹಳ್ಳಿಗಳಲ್ಲೂ ನೀರಿನ ಅಭಾವ ಎದುರಾಗಬಹುದು.
ಇದಕ್ಕಾಗಿ 7,080 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದ್ದು, ಒಪ್ಪಂದ ಮಾಡಿಕೊಂಡು ಇವುಗಳನ್ನು ಸರಕಾರ ತನ್ನ ವಶಕ್ಕೆ ಪಡೆಯಲಿದೆ. ನಂತರ ನೀರು ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. 25 ಜಿಲ್ಲೆಗಳಲ್ಲಿ ಮೇವಿನ ಕೊರತೆ ಎದುರಾಗಿದ್ದು, ಮೇವು ಖರೀದಿಗೆ ಟೆಂಡರ್ ಕರೆಯಲಾಗುತ್ತಿದೆ. ಮೇವಿನ ಸಮಸ್ಯೆ ನಿವಾರಣೆಗಾಗಿ 856 ಕೋಟಿ ರೂ.ಹಣ ಒದಗಿಸಲಾಗಿದೆ ಎಂದರು.
ಪೋಡಿ ಸಮಸ್ಯೆ ನಿವಾರಣೆಗೆ 364 ಸರ್ವೆಯರ್‍ಗಳನ್ನು ನೇಮಿಸಲಾಗುತ್ತಿದೆ. 27 ಸಹಾಯಕ ಸರ್ವೆಯರ್ ಗಳನ್ನು ನೇಮಿಸಿಕೊಳ್ಳಲು ಸರಕಾರ ಉದ್ದೇಶಿಸಿದ್ದು, ಪ್ರತಿಯೊಂದು ತಾಲೂಕಿಗೆ ಭೂಮಾಪನಕ್ಕಾಗಿ ಅತ್ಯಾಧುನಿಕ ರೋವರ್ಸ್ ಯಂತ್ರಗಳನ್ನು ಖರೀದಿಸಲಾಗುವುದು. ಆರ್ ಟಿಸಿಗೆ ಆಧಾರ್ ಜೋಡಣೆ ಮಾಡಲು ಸರಕಾರ ಉದ್ದೇಶಿಸಿದ್ದು, ಇದರಿಂದ ಬೆಳೆ ಪರಿಹಾರ ನೀಡಲು ನೆರವಾಗಲಿದೆ ಎಂದರು.