ಬರ ಪರಿಹಾರ; ಒಂದೆರೆಡು ದಿನದಲ್ಲಿ ಮಾರ್ಗಸೂಚಿ ಬಿಡುಗಡೆ: ಸಚಿವ ಚಲುವರಾಯಸ್ವಾಮಿ
ಬೆಳಗಾವಿ: ಮುಂಗಾರು ಹಂಗಾಮಿ ಬೆಳೆ ಹಾನಿ ಪರಿಹಾರ ಸಂಬಂಧಿಸಿದಂತೆ ನಾಳೆ ಅಥವಾ ನಾಳಿದ್ದು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಶುಕ್ರವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶರಣಗೌಡ ಬಯ್ಯಪುರ ಪ್ರಶ್ನೆಗೆ ಉತ್ತರಿಸಿದ ಅವರು, ರೈತರಿಗೆ ಅವರ ಜಮೀನಿಗೆ ಅನುಗುಣವಾಗಿ 2 ಸಾವಿರ ರೂ.ವರೆಗೆ ಬೆಳೆ ಪರಿಹಾರ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡಲಾಗುವುದು. ಈ ಸಂಬಂಧ ಮಾರ್ಗಸೂಚಿ ನಾಳೆ ಅಥವಾ ನಾಳಿದ್ದು ಬಿಡುಗಡೆ ಮಾಡುತ್ತೇವೆ ಎಂದರು.
2023ನೆ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ಸಜ್ಜೆ, ತೊಗರಿ, ಹೆಸರು, ಉದ್ದು, ಹುರುಳಿ, ಅವರೆ, ಅಲಸಂದೆ, ಕಡಲೆ, ಸಾಸಿವೆ, ಸೂರ್ಯಕಾಂತಿ, ಸೋಯಾ ಅವರೆ, ಹತ್ತಿ, ಕಬ್ಬು ಹಾಗೂ ತಂಬಾಕು ಬೆಳೆಗಳು ಹಾಳಾಗಿವೆ. ಹಾನಿಯಾದ ಬೆಳೆ ಹಾನಿ ಪರಿಹಾರಕ್ಕಾಗಿ ಎನ್‍ಡಿಆರ್ ಫ್ ನಿಯಮದಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಆರ್ಥಿಕ ನೆರವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.