ಕನ್ನಡಿಗರಿಗೆ ನ್ಯಾಯ ದೊರಕಿಸದ ಕೆಪಿಎಸ್ಸಿ ತನ್ನ ಅಸಹಾಯಕತೆ ಒಪ್ಪಿಕೊಳ್ಳಲಿ : ಡಾ.ಪುರುಷೋತ್ತಮ ಬಿಳಿಮಲೆ
ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ಕನ್ನಡ ಮಾಧ್ಯಮದ ಪ್ರಶ್ನೆ ಪತ್ರಿಕೆಗಳಲ್ಲಿನ ಎಡವಟ್ಟುಗಳನ್ನು ಮುಂದುವರೆಸಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ನಡೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತೀವ್ರವಾಗಿ ಖಂಡಿಸಿದ್ದು, ಆಯೋಗವು ಮತ್ತೊಮ್ಮೆ ಬೇಡದ ಕಾರಣಗಳಿಗೆ ಸುದ್ದಿಯಲ್ಲಿರುವುದು ವಿಷಾದದ ಸಂಗತಿ ಎಂದು ಟೀಕಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಆಯೋಗವು ನಡೆಸುವ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವುದು ಕನ್ನಡ ವಿರೋಧಿ ಧೋರಣೆಯನ್ನು ತಳೆದಿದೆಯೇ ಎನ್ನುವ ಗೊಂದಲವನ್ನು ಇದು ಉಂಟುಮಾಡುತ್ತಿದೆ. ‘ಭಾರತದಲ್ಲಿನ ಪುನರಂ ಅವರ ಲೋಕನ ವಿಮರ್ಶಿ ಅಧಿಕಾರವು ಹೈಕೋಟ್ನೊಂದಿಗೆ ಸುಪ್ರಿಂ ಕೋರ್ಟ್ ಹೊಂದಿದೆ’ ಎನ್ನುವ ಅರ್ಥವಿಲ್ಲದ ವಾಕ್ಯವೂ ಪ್ರಶ್ನೆಯಾಗಿರುವುದು ಆಯೋಗದ ಗಂಭೀರ ಲೋಪದ ವಿಷಯ ಎಂದು ಉಲ್ಲೇಖಿಸಿದ್ದಾರೆ.
ಕಳೆದ ಬಾರಿ ಪ್ರಾಧಿಕಾರದ ಸೂಚನೆಯ ಮೇರೆಗೆ ಆಯೋಗದಲ್ಲಿ ಭಾಷಾಂತರ ವಿಭಾಗವನ್ನು ಆರಂಭಿಸುವುದಾಗಿ ಭರವಸೆಯನ್ನು ನೀಡಿದರೂ ಇಲ್ಲಿಯವರೆಗೂ ಕ್ರಮಕ್ಕೆ ಮುಂದಾಗದಿರುವುದು ಆಯೋಗದ ಅಸಹಾಯಕತೆಯನ್ನು ತೋರಿಸುತ್ತದೆ. ಪದೇ ಪದೇ ಈ ರೀತಿಯ ಪ್ರಮಾದಗಳು ಉಂಟಾಗಲು ಕಾರಣವಾದರೂ ಏನು? ಈ ರೀತಿಯ ಪ್ರಮಾದಗಳನ್ನು ಸರಿಪಡಿಸಲು ಆಯೋಗಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಕನ್ನಡದ ಅವಗಣನೆಯ ಮೂಲ ಎಲ್ಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಆಯೋಗವು ತಮ್ಮ ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಉತ್ತರವನ್ನು ಸಲ್ಲಿಸುವ ಬಾಧ್ಯತೆಯನ್ನು ಹೊಂದಿದೆ. ಈ ಲೋಪಕ್ಕೆ ಕಾರಣವಾಗಿರಬಹುದಾದ ಅಧಿಕಾರಿಗಳ ವಿರುದ್ಧ ಶಿಸ್ತಿನಕ್ರಮ ಕೈಗೊಂಡು ಕನ್ನಡಿಗ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸದೇ ಹೋದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಲೋಪವನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.