515 ಭೂಸೇನಾ ಕಾರ್ಯಾಗಾರದ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ : ಡಾ.ಪುರುಷೋತ್ತಮ ಬಿಳಿಮಲೆ
ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ಕೇಂದ್ರ ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಬೆಂಗಳೂರಿನ 515 ಭೂಸೇನಾ ಕಾರ್ಯಾಗಾರಕ್ಕೆ ಸಂಬಂಧಿಸಿದಂತೆ ಅಧಿಸೂಚಿಸಿರುವ ಗ್ರೂಪ್ ಸಿ ಮತ್ತು ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆಯನ್ನು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ಗೆ ಪತ್ರ ಬರೆದಿರುವ ಅವರು, ಕೇಂದ್ರೋದ್ಯಮಗಳು ಸ್ಥಳೀಯರಿಗೆ ಉದ್ಯೋಗವನ್ನು ಕಲ್ಪಿಸುವುದು ಒಕ್ಕೂಟ ವ್ಯವಸ್ಥೆಯ ಕರ್ತವ್ಯವಾಗಬೇಕಿದ್ದು, ಪದೇ ಪದೇ ಈ ಸಾಂವಿಧಾನಿಕ ಆಶಯವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಹನಶೀಲವಾದ ವ್ಯವಸ್ಥೆ ರೂಪುಗೊಳ್ಳಬೇಕಾದಲ್ಲಿ ಕೇಂದ್ರವು ರಾಜ್ಯ ಸರಕಾರಗಳ ಆಶಯಗಳನ್ನು ಗೌರವಿಸುವುದು ಮುಖ್ಯ. ರಕ್ಷಣಾ ಇಲಾಖೆ ನೇಮಕಾತಿ ಅಧಿಸೂಚನೆಗಳನ್ನು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟಿಸಿ ಕನ್ನಡಿಗ ಅಭ್ಯರ್ಥಿಗಳ ಗಮನ ಸೆಳೆಯಬೇಕು. ಅಭ್ಯರ್ಥಿಗಳು ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ಸಮಸ್ಯೆಗೆ ಪರಿಹಾರ ದೊರಕುವವರೆಗೂ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿರುವ 515 ಭೂಸೇನಾ ಕಾರ್ಯಾಗಾರದಲ್ಲಿನ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆದರೆ, ಕರ್ನಾಟಕ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ, ಪರಭಾಷಿಕರು ನೇಮಕವಾಗುವಂತೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರದೇ ಪಾಶ್ವನಾಥ, ಅಖಿಲ ಕರ್ನಾಟಕ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಹಾಗೂ ಕರ್ನಾಟಕ ವಿದ್ಯಾರ್ಥಿ ಕೂಟದ ಅಧ್ಯಕ್ಷ ಹರ್ಷಾ ಲಕ್ಷ್ಮಣ್ ಪುರುಷೋತ್ತಮ ಬಿಳಿಮಲೆಗೆ ಮನವಿ ಪತ್ರ ಸಲ್ಲಿಸಿದ್ದರು.
ಅಲ್ಲದೇ, ತಾವು ಮಧ್ಯಪ್ರವೇಶಿಸಿ ಕೇಂದ್ರ ಹಾಗೂ ರಾಜ್ಯ ಸರಕಾರ, ಸಂಸದರು ಮತ್ತು 515 ಭೂ ಸೇನಾ ಕಾರ್ಯಾಗಾರದ ಕಮಾಂಡೆಂಡ್ಗೆ ಪತ್ರ ಬರೆದು, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.