ದಿಟ್ಟ ಐಪಿಎಸ್ ಅಧಿಕಾರಿ ಮೊಹಮ್ಮದ್ ಸುಜೀತ ಎಂ ಎಸ್
ಅತ್ಯಲ್ಪ ಕಾಲದಲ್ಲೇ ಖ್ಯಾತಿ ಪಡೆದ ಹಾಸನದ ನೂತನ ಎಸ್ಪಿ
ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಮಯ. 2017ರಲ್ಲಿ ಸಚಿವ ಸಂಪುಟ ಪುನರ್ರಚನೆ ಸಂದರ್ಭ ಕಂದಾಯ ಸಚಿವರಾಗಿದ್ದ ವಿ ಶ್ರೀನಿವಾಸ್ ಪ್ರಸಾದ್ ಕೈಬಿಟ್ಟಿದ್ದಕ್ಕೆ, ವಿ ಶ್ರೀನಿವಾಸ್ ಪ್ರಸಾದ್ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದರು. ಉಪಚುನಾವಣೆ ಘೋಷಣೆಯೂ ಆಯ್ತು. ಬಿಜೆಪಿಯಿಂದ ನಂಜನಗೂಡು ವಿಧಾನ ಸಭಾ ಕ್ಷೇತ್ರಕ್ಕೆ ವಿ ಶ್ರೀನಿವಾಸ್ ಪ್ರಸಾದ್ ಅಭ್ಯರ್ಥಿಯಾದರು. ಕಳಲೆ ಎನ್ ಕೇಶವಮೂರ್ತಿ ಕಾಂಗ್ರೆಸ್ ಅಭ್ಯರ್ಥಿಯಾದರು. ಹೈ ವೋಲ್ಟೇಜ್ ಚುನಾವಣೆ ಅದು. ಎರಡೂ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆ ಎದುರಿಸಿದವು. ಬಿರುಸಿನ ಪ್ರಚಾರವೂ ನಡೆಯಿತು. ಸಿದ್ದರಾಮಯ್ಯ ಜಿಲ್ಲೆಯ ನಂಜನಗೂಡು ಉಪಚುನಾವಣೆ ಟಿ-ಟ್ವೆಂಟಿ ಮಾದರಿಯ ಕ್ರಿಕೆಟ್ ಪಂದ್ಯದಂತೆ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿತ್ತು. ಫಲಿತಾಂಶ ಘೋಷಣೆಯಾದಾಗ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಈ ಚುನಾವಣೆಯ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಚುನಾವಣೆ ಸಲೀಸಾಗಿ ನಡೆಯಲು ಹದ್ದಿನ ಕಣ್ಣಿಟ್ಟು ಕೆಲಸ ಮಾಡಿದ ಐಪಿಎಸ್ ಅಧಿಕಾರಿಯೇ ಮೊಹಮ್ಮದ್ ಸುಜೀತ ಎಂ.ಎಸ್.
ಆಗಷ್ಟೇ ಐಪಿಎಸ್ ತರಬೇತಿ ಮುಗಿಸಿ ಮೈಸೂರು ಜಿಲ್ಲೆಯ ನಂಜನಗೂಡು ಉಪ ವಿಭಾಗಕ್ಕೆ ಎಎಸ್ಪಿಯಾಗಿ ಆಗಮಿಸಿದ ಮೊಹಮ್ಮದ್ ಸುಜೀತ ಎಲ್ಲರಿಗೂ ಅಚ್ಚರಿ ಹುಟ್ಟಿಸುವಂತೆ ಕೆಲಸ ಮಾಡಿದ್ದರು. ಘಟಾನುಘಟಿಗಳ ಕ್ಷೇತ್ರದಲ್ಲಿ ಯುವ ಅಧಿಕಾರಿಯ ಪಾದರಸದಂತ ಚಲನೆ ಅವರೆಡೆ ಎಲ್ಲರು ಕಣ್ಣರಳಿಸಿ ನೋಡುವಂತೆ ಮಾಡಿತ್ತು. ಯಾವುದೇ ಕ್ಷಣದಲ್ಲೂ ಮುನ್ನುಗ್ಗಿ ಕೆಲಸ ಮಾಡುವ ಅವರ ಗುಣ ಸಹಜವಾಗಿಯೇ ಯುವ ಜನರನ್ನು ಅವರತ್ತ ಆಕರ್ಷಿಸಿತ್ತು. ಮೈಸೂರು ಜಿಲ್ಲೆಯಲ್ಲಿದ್ದಾಗ ಆಗಿನ ಜಿಲ್ಲಾಧಿಕಾರಿ ರಂದೀಪ್, ಎಸ್ಪಿ ರವಿ ಚೆನ್ನಣ್ಣನವರ್ ಜೊತೆಗೂಡಿ ಹುಣಸೂರು ರಸ್ತೆಯ ಕಲಾಮಂದಿರಲ್ಲಿ ಆಯೋಜಿಸಿದ್ದ ಸಿವಿಲ್ ಸರ್ವಿಸ್ ಪರೀಕ್ಷೆಗಳೆಡೆಗೆ ಯುವಜನರನ್ನು ಸೆಳೆಯುವ ಕಾರ್ಯಗಾರ ಅವರಲ್ಲೊಬ್ಬ ಉತ್ತಮ ವಾಗ್ಮಿಯನ್ನು ಹೊರತಂದಿತ್ತು.
ಇಂದಿಗೂ ಸಾಮಾಜಿಕ ಜಾಲತಾಣಗಳ ಮೂಲಕ ನಾಗರಿಕ ಸೇವಾ ಪರೀಕ್ಷೆಗಳೆಡೆಗೆ ಯುವಜನರನ್ನು ಸೆಳೆಯುವ ಅವರ ವೀಡಿಯೂ ಅತೀ ಹೆಚ್ಚು ವೀಕ್ಷಣೆ ಪಡೆಯುತ್ತದೆ. ಆಸಕ್ತರನ್ನು ನಾಗರಿಕ ಸೇವೆಗೆ ಸೆಳೆಯಲು, ಆಸಕ್ತಿ ಹುಟ್ಟಿಸುವಲ್ಲಿ ಅವು ಒಂದು ಹೆಜ್ಜೆ ಮುಂದಿದೆ. ಕೋಲಾರ ಜಿಲ್ಲೆಯ ಎಸ್ಪಿಯಾಗಿದ್ದಾಗ ಮಹಿಳಾ ಸಬಲೀಕರಣಕ್ಕಾಗಿ ಅವರು ಕೈಗೊಂಡ ಕೆಲಸಗಳು ಒಬ್ಬ ಪೊಲೀಸ್ ಅಧಿಕಾರಿ ಯಾವ ರೀತಿ ಸಮಾಜವನ್ನು ಬದಲಾಯಿಸಬಹುದು ಎಂದು ತೋರಿಸಿಕೊಟ್ಟಿತ್ತು. 21 ದಿನಗಳ ಮಾದರಿ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಆತ್ಮ ರಕ್ಷಣೆಯ ತರಬೇತಿ ನೀಡಿದ್ದರು. ಬೈಕ್ ರೈಡಿಂಗ್ ಕಲಿಸಿಕೊಟ್ಟರು. ಕರಾಟೆ ಕಲಿಸುವ ಮೂಲಕ ಆತ್ಮವಿಶ್ವಾಸ ತುಂಬಿದರು. ಸುಮಾರು 300 ಕುಟುಂಬಗಳು ಇದರ ಪ್ರಯೋಜನ ಪಡೆದವು.
ಮೂಲತಃ ತಮಿಳುನಾಡಿನವರಾದ ಮೊಹಮ್ಮದ್ ಸುಜೀತಾ 2014ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಅವರ ತಂದೆ ಮೊಹಮ್ಮದ್ ಸಲ್ಮಾನ್ ಟುಟುಕೋರಿನ್ ಬಂದರು ಟ್ರಸ್ಟ್‌ನಲ್ಲಿ ಉದ್ಯೋಗಿಯಾಗಿದ್ದರು. ತಾಯಿ ಮೊಹಮ್ಮದ್ ಅಝೀಝಾ ಅವರಿಗೂ ಮಗಳು ನಾಗರೀಕ ಸೇವೆಗೆ ಸೇರಬೇಕೆಂಬ ಆಸೆಯಿತ್ತು. 2011ರಲ್ಲಿ ನಾಗರೀಕ ಸೇವಾ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸಿದರೂ, 2014ಕ್ಕೆ ಇತಿಹಾಸವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ನಾಗರೀಕ ಸೇವೆಗೆ ಪ್ರವೇಶ ಪಡೆದರು. ಈಗ ರಾಜಕೀಯವಾಗಿ ಸೂಕ್ಷ್ಮವಾದ ಹಾಸನ ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿರುವ ಮೊಹಮ್ಮದ್ ಸುಜೀತಾ ಎಂ.ಎಸ್ ಅವರ ಮುಂದೆ ಬಹಳಷ್ಟು ಸವಾಲುಗಳಿವೆ.