ವಿದ್ಯಾರ್ಥಿಗಳಿಂದ ಶಾಲೆಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸದಂತೆ ಶಿಕ್ಷಣ ಇಲಾಖೆ ಸುತ್ತೋಲೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಿದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ರಾಜ್ಯದ ಶಾಲೆಗಳಲ್ಲಿರುವ ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಬಾರದು ಎಂದು ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಇಲಾಖೆಯಿಂದ ಕಾಲ-ಕಾಲಕ್ಕೆ ಹೊರಡಿಸಲಾಗುವ ಸೂಚನೆ, ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಹಾಗೆಯೇ ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುವಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ರಾಜ್ಯದ ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮತ್ತು ಸಂಬಂಧಿಸಿದ ಎಲ್ಲ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಂತಹ ಕಾರ್ಯಗಳಿಂದ ದೂರವಿರಿಸುವುದು ಅಧಿಕಾರಿಗಳ, ಮುಖ್ಯ ಶಿಕ್ಷಕರ, ಸಿಬ್ಬಂದಿಯ ಕರ್ತವ್ಯವಾಗಿರುತ್ತದೆ. ಆದರೆ ಈ ಹೊಣೆಗಾರಿಕೆ ಮರೆತು ವಿದ್ಯಾರ್ಥಿಗಳನ್ನು ಸ್ವಚ್ಛತೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಖಂಡನೀಯ ಎಂದು ತಿಳಿಸಿದೆ.
ರಾಜ್ಯದ ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತಾ ಕಾರ್ಯ ಮತ್ತು ನಿರ್ವಹಣೆಯನ್ನು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಂದ ಕೈಗೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದೇ ರೀತಿ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಸಹ ಇಂತಹ ಯಾವುದೇ ಪ್ರಕರಣಗಳು ಜರುಗದಂತೆ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗಳು ಹಾಗೂ ಶಾಲಾ ಮುಖ್ಯಸ್ಥರು ಎಚ್ಚರಿಕೆ ವಹಿಸಲು ತಿಳಿಸಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಶಾಲಾ ನಿರ್ವಹಣಾ ಅನುದಾನವನ್ನು ಆಯಾ ಸರಕಾರಿ ಶಾಲೆಗಳಿಗೆ ಪ್ರಸ್ತುತ ಸಾಲಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಪ್ರಥಮ ಪ್ರಾಶಸ್ತ್ಯದಲ್ಲಿ ಶೌಚಾಲಯಗಳ ಸ್ವಚ್ಛತಾ ಕಾರ್ಯಗಳಿಗೆ ಬಳಸಿಕೊಂಡು ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್ಡಿಎಂಸಿ) ಸಹಕಾರದೊಂದಿಗೆ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಶೌಚಾಲಯಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಹೇಳಿದೆ.
ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ)ಗಳು ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸತಕ್ಕದ್ದು ಹಾಗೂ ಯಾವುದೇ ವಿದ್ಯಾರ್ಥಿಗಳು ಶಾಲಾ ಶೌಚಾಲಯಗಳ ತೊಡಗಿಸಿಕೊಂಡಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಶಾಲೆಗಳಿಗೆ ಕಾಲ-ಕಾಲಕ್ಕೆ ಖುದ್ದು ಭೇಟಿ ನೀಡಿ ಶಾಲೆಗಳಲ್ಲಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾದ ಬಳಕೆಗೆ ಯೋಗ್ಯವಾದ ಶೌಚಾಲಯಗಳು ಲಭ್ಯವಿರುವುದನ್ನು ಪರಿಶೀಲಿಸಬೇಕು. ಶಾಲಾ ಅವಧಿಯಲ್ಲಿ ಈ ಶೌಚಾಲಯಗಳಿಗೆ ಬೀಗ ಹಾಕದೇ ವಿದ್ಯಾರ್ಥಿಗಳ ಉಪಯೋಗಕ್ಕೆ ಅವಕಾಶ ಕಲ್ಪಿಸಿರುವುದನ್ನು ಹಾಗೂ ವಿದ್ಯಾರ್ಥಿಗಳನ್ನು ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವುದಿಲ್ಲ ಎಂಬ ಅಂಶಗಳನ್ನು ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆ ಶಾಲಾ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ.
ಶಾಲೆಯ ಸಂದರ್ಶನದ ವೇಳೆಯಲ್ಲಿ ಒಂದು ವೇಳೆ ವಿದ್ಯಾರ್ಥಿಗಳನ್ನು ಶಾಲಾ ಶೌಚಾಲಯಗಳ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವುದು ಗಮನಕ್ಕೆ ಬಂದಲ್ಲಿ, ಅದಕ್ಕೆ ಕಾರಣರಾದವರ ಮೇಲೆ ತಕ್ಷಣವೇ ಕ್ರಮವಹಿಸಲು ಅನುವಾಗುವಂತೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಉಪನಿರ್ದೇಶಕರಿಗೆ(ಆಡಳಿತ) ತಕ್ಷಣ ವರದಿ ಮಾಡಲು ಶಾಲಾ ಉಸ್ತುವಾರಿ ಹಾಗೂ ಮೇಲ್ವಿಚಾರಣೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಿಳಿಸಿದೆ.
ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿದರೆ ಎಫ್ಐಆರ್
ಒಂದು ವೇಳೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಸಿಬ್ಬಂದಿಯು ವಿದ್ಯಾರ್ಥಿಗಳನ್ನು ಶಾಲಾ ಶೌಚಾಲಯಗಳ ಸ್ವಚ್ಛತೆಗಾಗಿ ಬಳಸಿಕೊಂಡಲ್ಲಿ ಅಂತಹವರ ಮೇಲೆ ಇಲಾಖಾ ವತಿಯಿಂದ ನಿಯಮಾನುಸಾರ ಶಿಸ್ತು ಕ್ರಮಗಳನ್ನು ಜರುಗಿಸಲಾಗುವುದು. ಹಾಗೆಯೇ ಪ್ರಥಮ ವರ್ತಮಾನ ವರದಿ (ಎಫ್ಐಆರ್) ದಾಖಲಿಸಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.