ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಪರಿಗಣನೆಗೆ ಪ್ರಯತ್ನ: ಮುಖ್ಯಮಂತ್ರಿ ಸಿದ್ದರಾಮಯ್ಯ
"ಪ್ರತಿ ವರ್ಷ ಕಂಬಳ ಆಯೋಜಿಸಲು ಸಹಕಾರ"
ಬೆಂಗಳೂರು: ರಾಜ್ಯದಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಪರಿಗಣಿಸುವಂತೆ ಬೆಂಗಳೂರು ಕಂಬಳ ಸಮಿತಿಯವರು ಮನವಿ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಚಿವರ ಜೊತೆ ಈ ಸಂಬಂಧ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಸಮಿತಿ ವತಿಯಿಂದ ಆಯೋಜಿಸಲಾಗಿರುವ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ದ ಮುಖ್ಯಸಭಾ ಕಾರ್ಯಕ್ರಮವನ್ನು ಡಾ.ಪುನೀತ್ ರಾಜ್‍ಕುಮಾರ್ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷವಾಗಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯವರಿಗೆ ತಮ್ಮ ಮಾತೃ ಭಾಷೆ ತುಳು ಬಗ್ಗೆ ಪ್ರೀತಿ, ಅಭಿಮಾನ ಇದೆ. ನಮ್ಮ ಕರಾವಳಿಯ ಶಾಸಕರು ಪರಸ್ಪರ ಭೇಟಿ ಮಾಡಿದರೆ ಕನ್ನಡದ ಬದಲು ತುಳುವಿನಲ್ಲೆ ಮಾತನಾಡುತ್ತಾರೆ. ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ದುಬೈನಲ್ಲಿ ನೆಲೆಸಿದ್ದರೂ ಕರಾವಳಿ ಭಾಗದವರು ಸಿಕ್ಕಿದರೆ ತುಳುವಿನಲ್ಲೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಕರಾವಳಿ ಜಿಲ್ಲೆಯ ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಮಂಜೂರು ಮಾಡುವಂತೆಯೂ ಮನವಿ ಮಾಡಿದ್ದಾರೆ. ನಿವೇಶನವನ್ನು ಗುರುತಿಸಿ ಅರ್ಜಿ ಸಲ್ಲಿಸಿ, ಮಂಜೂರು ಮಾಡಿಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಕರಾವಳಿ ಪ್ರದೇಶದ ಈ ಜಾನಪದ ಕಲೆಯನ್ನು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೆಂಗಳೂರು ನಗರಕ್ಕೆ ಪರಿಚಯಿಸುವ ಪ್ರಯತ್ನ ನಡೆಸಿದ್ದು ನಿಜಕ್ಕೂ ಶ್ಲಾಘನೀಯ. ಕಂಬಳ ವೀಕ್ಷಿಸಲು ಬೆಂಗಳೂರಿನಲ್ಲಿ ಇಷ್ಟೊಂದು ಜನ ಬರುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಇಲ್ಲಿ ಬಂದು ನೋಡಿದಾಗ ಆಶ್ಚರ್ಯ ಆಯಿತು ಎಂದು ಸಿದ್ದರಾಮಯ್ಯ ಹೇಳಿದರು.
ಪೇಟಾ ಸಂಸ್ಥೆಯವರು ತಮಿಳುನಾಡಿನ ಜಲ್ಲಿಕಟ್ಟು ಹಾಗೂ ನಮ್ಮ ರಾಜ್ಯದ ಕಂಬಳ ಕ್ರೀಡೆಯನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆಗ ಸಾಮಾನ್ಯ ಜನರ ಈ ಕ್ರೀಡೆಯನ್ನು ಉಳಿಸಲು ಸುಗ್ರೀವಾಜ್ಞೆ ಹೊರಡಿಸಿದ್ದೆ. ಅದರಿಂದಾಗಿ, ಇವತ್ತು ಈ ಕ್ರೀಡೆ ಉಳಿದುಕೊಂಡಿದೆ. ಇದನ್ನು ಬೆಳೆಸುವ ಜವಾಬ್ದಾರಿ ನಿಮ್ಮೆಲರ ಮೇಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರತಿ ವರ್ಷ ಕಂಬಳ ಆಯೋಜಿಸಿ: ಬೆಂಗಳೂರಿನಲ್ಲಿ ಆಯೋಜಿಸಿರುವ ಕಂಬಳವನ್ನು ಕೇವಲ ಈ ವರ್ಷಕ್ಕೆ ಸೀಮಿತ ಮಾಡಬೇಡಿ. ಪ್ರತಿವರ್ಷ ವಿಶೇಷವಾಗಿ ನವೆಂಬರ್, ಡಿಸೆಂಬರ್ ನಲ್ಲಿ ಆಯೋಜಿಸಿ. ಅದಕ್ಕೆ ಅಗತ್ಯವಿರುವ ಸಹಕಾರವನ್ನು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕತಿಯ ಎರಡು ಕಣ್ಣುಗಳು ಅಂದರೆ ಯಕ್ಷಗಾನ ಹಾಗೂ ಕಂಬಳ. ಇವುಗಳನ್ನು ಜೀವಂತವಾಗಿಡಲು ನಮ್ಮ ಹಿರಿಯರು ತಮ್ಮದೇ ಆದ ರೀತಿಯಲ್ಲಿ ಶ್ರಮಪಟ್ಟಿದ್ದಾರೆ. ಬೆಂಗಳೂರು ಕಂಬಳ ಸಮಿತಿಯವರು ದಕ್ಷಿಣ ಕನ್ನಡದ ಸಂಸ್ಕತಿಯನ್ನು ಬೆಂಗಳೂರಿನಲ್ಲಿ ಬಿಂಬಿಸುವ ಮೂಲಕ ಇಡೀ ದೇಶಕ್ಕೆ ಪರಿಚಯಿಸಿದ್ದಾರೆ. ನಾನು ಇಲ್ಲಿಗೆ ಬರುವಾಗ ನಾನು ಕರಾವಳಿಯಲ್ಲಿ ಇದ್ದೇನಾ ಅಥವಾ ಬೆಂಗಳೂರಿನಲ್ಲಿ ಇದ್ದೇನಾ ಅನ್ನೋದು ಗೊತ್ತಾಗಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ, ಗೌರವಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷ ಗುಣರಂಜನ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಆಭರಣ ಜ್ಯುವೆಲರ್ಸ್ ಮಾಲಕ ಪ್ರಕಾಶ್ ಕಾಮತ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ನಟಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.