ಕ್ರಿಕೆಟ್ ಆಡುವಾಗ ವಿದ್ಯುತ್ ಆಘಾತ: 10ನೇ ತರಗತಿ ವಿದ್ಯಾರ್ಥಿ ಮೃತ್ಯು
Photo-Canva
ಧಾರವಾಡ: 16 ವರ್ಷದ ಬಾಲಕನೊಬ್ಬ ಕ್ರಿಕೆಟ್ ಆಡುವಾಗ ವಿದ್ಯುದಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಶನಿವಾರ ಧಾರವಾಡ ಜಿಲ್ಲೆಯ ಸಿದ್ದರಾಮ ಕಾಲನಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಹತ್ತನೆ ತರಗತಿಯ ವಿದ್ಯಾರ್ಥಿಯಾದ ಶ್ರೇಯಸ್ ಶಿನ್ನೂರ ಎಂದು ಗುರುತಿಸಲಾಗಿದೆ.
ಮೃತ ಬಾಲಕನನ್ನು ರಕ್ಷಿಸಲು ಯತ್ನಿಸಿದ ಆತನ ಸ್ನೇಹಿತನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯೊಂದರಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಪ್ರಕಾರ, ಶುಕ್ರವಾರ ಸಂಜೆ ಬಾಲಕರು ಮನೆಯ ತಾರಸಿಯ ಮೇಲೆ ಕ್ರಿಕೆಟ್ ಆಡುತ್ತಿದ್ದಾಗ, ಶ್ರೇಯಸ್ ಬಾಲನ್ನು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಮನೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತನ್ನ ಕೈಯನ್ನು ತಾಕಿಸಿದ್ದಾನೆ ಎಂದು ಹೇಳಿದ್ದಾರೆ.
ಶ್ರೇಯಸ್ ನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಅದಾಗಲೇ ಮೃತಪಟ್ಟಿದದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೃತ ಬಾಲಕನ ತಂದೆ ಅಶೋಕ್ ಶಿನ್ನೂರ, ನನ್ನ ಒಬ್ಬನೇ ಪುತ್ರನಾದ ಆತ ಸಂಜೆ 5 ಗಂಟೆಗೆ ಶಾಲೆಯಿಂದ ಮನೆಗೆ ಮರಳಿದ್ದ ಎಂದು ವಿವರಿಸಿದ್ದಾರೆ.
“ಆತ ತನ್ನ ಗೆಳೆಯರೊಂದಿಗೆ ಕ್ರಿಕೆಟ್ ಆಡಲು ತೆರಳುವುದಕ್ಕೂ ಮುನ್ನ ಕೆಲ ಸಮಯ ಮೊಬೈಲ್ ನಲ್ಲಿ ಸಮಯ ಕಳೆದಿದ್ದ. 10 ನಿಮಿಷ ಕಳೆದ ನಂತರ ಜನರು ನನ್ನನ್ನು ಮನೆಯಿಂದ ಹೊರಗೆ ಕರೆದರು. ನಾವು ತಾರಸಿಗೆ ಹೋದಾಗ ಶ್ರೇಯಸ್ ತಲೆ ಹಾಗೂ ಹೊಟ್ಟೆಗೆ ಗಾಯವಾಗಿರುವುದು ಕಂಡು ಬಂದಿತು. ನಾವು ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ, ಆತ ಬದುಕುಳಿಯಲಿಲ್ಲ” ಎಂದು ಅಶೋಕ್ ಶಿನ್ನೂರ ತಿಳಿಸಿದ್ದಾರೆ.
ಘಟನೆಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.