ವಿದ್ಯುತ್ ಕಳವು ಆರೋಪ: 68 ಸಾವಿರ ರೂ.ದಂಡ ಪಾವತಿಸುವಂತೆ ಕುಮಾರಸ್ವಾಮಿಗೆ ಸೂಚನೆ
ಬೆಂಗಳೂರು, ನ.16: ಬೆಳಕಿಗೆ ಹಬ್ಬ ದೀಪಾವಳಿ ಹಬ್ಬದ ನಿಮಿತ್ತ ತಮ್ಮ ಮನೆಗೆ ದೀಪಾಲಂಕಾರ ಮಾಡಲು ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಎಳೆದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಸ್ಕಾಂ 68 ಸಾವಿರ ರೂ.ದಂಡ ವಿಧಿಸಿದೆ ಎಂದು ವರದಿಯಾಗಿದೆ.
ಕುಮಾರಸ್ವಾಮಿ ಅವರ ಮನೆಯನ್ನು ಪರಿಶೀಲಿಸಿದ ಬೆಸ್ಕಾಂ ಅಧಿಕಾರಿಗಳು ಏಳು ದಿನಗಳೊಳಗೆ 68,000 ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನೂ, ಜಯನಗರದಲ್ಲಿರುವ ಬೆಸ್ಕಾಂ ವಿಜಿಲೆನ್ಸ್ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ವಿದ್ಯುತ್ ಕಾಯ್ದೆಯಡಿ ಎಫ್‍ಐಆರ್ ದಾಖಲಾಗಿತ್ತು. ವೈರಲ್ ಆಗಿರುವ ವಿಡಿಯೋ ಕ್ಲಿಪ್ ಆಧರಿಸಿ ದೂರು ದಾಖಲಿಸಲಾಗಿದೆ ಎಂದು ಇಂಧನ ಇಲಾಖೆಯ ಹೇಳಿಕೆ ತಿಳಿಸಿದೆ. ತನಗೆ ತಿಳಿಯದಂತೆ ಕಂಬದಿಂದ ಪವರ್ ಪಡೆಯಲಾಗಿದೆ ಎಂದು ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದರು.
ಮತ್ತೊಂದೆಡೆ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಚಾರ ವ್ಯಾಪಕ ಟೀಕೆ ಮತ್ತು ಚರ್ಚೆಗೆ ಒಳಗಾಗಿತ್ತಲ್ಲದೆ, ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶವೂ ವ್ಯಕ್ತವಾಗಿತ್ತು.