ಲೋಕಸಭಾ ಚುನಾವಣೆಯಲ್ಲಿ ಸಚಿವರ ಸಾಮರ್ಥ್ಯ ಪರೀಕ್ಷೆ: ಸಚಿವ ಬಿ.ನಾಗೇಂದ್ರ
ಬಳ್ಳಾರಿ: ದಿಲ್ಲಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರ ಜೊತೆ ನಡೆದ ಸಚಿವರ ಸಭೆಯಲ್ಲಿ ನಮಗೆಲ್ಲರಿಗೂ ಎಚ್ಚರಿಕೆ, ಸೂಚನೆಗಳನ್ನು ನೀಡಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿರುವಂತೆ ಈ ಲೋಕಸಭಾ ಚುನಾವಣೆಯಲ್ಲಿ ಸಚಿವರ ಸಾಮರ್ಥ್ಯ ಹಾಗೂ ಕಾರ್ಯವೈಖರಿಯನ್ನು ಪರೀಕ್ಷಿಸಲಾಗುತ್ತದೆ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಟ್ಟು ಆಯಾ ಕ್ಷೇತ್ರದ ಲೋಕಸಭೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರದೆ ಇದ್ದರೆ, ಕೊಟ್ಟ ಕುದುರೆಯನ್ನು ಏರದವನು ಶೂರನೂ ಅಲ್ಲ, ವೀರನೂ ಅಲ್ಲ ಎನ್ನುವಂತಾಗುತ್ತದೆ ಎಂದರು.
ಸಚಿವರಿಗೆ ಜವಾಬ್ದಾರಿ ವಹಿಸಿರುವ ಲೋಕಸಭೆ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರದಿದ್ದರೆ ಅವರು ಅಸಮರ್ಥ ಸಚಿವರಾಗುತ್ತಾರೆ. ಲೋಕಸಭೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯೂ ಉಸ್ತುವಾರಿ ಸಚಿವರ ಜೊತೆಗೆ ಆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಾಸಕರದ್ದು ಆಗಿರುತ್ತದೆ ಎಂದು ಅವರು ಹೇಳಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಸಂಕಲ್ಪ ತೊಟ್ಟಿದ್ದೇನೆ. ಆ ಮೂಲಕ ನಮ್ಮ ನಾಯಕಿ ಸೋನಿಯಾ ಗಾಂಧಿ ಅವರಿಗೆ ಉಡುಗೊರೆ ನೀಡುತ್ತೇವೆ. ಬಳ್ಳಾರಿ ಕ್ಷೇತ್ರದಿಂದ ವೆಂಕಟೇಶ್ ಪ್ರಸಾದ್, ಮುರುಳಿ ಕೃಷ್ಣ, ವಿ.ಎಸ್.ಉಗ್ರಪ್ಪ, ಗುಜ್ಜಲ್ ನಾಗರಾಜ ಅರ್ಜಿ ಹಾಕಿದ್ದಾರೆ. ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ನಾಗೇಂದ್ರ ತಿಳಿಸಿದರು.
ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲೆ ರಾಮನಿದ್ದಾನೆ. ಬಿಜೆಪಿಯವರು ರಾಮ ಮಂದಿರ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಅನೇಕ ಹಿರಿಯ ಸ್ವಾಮೀಜಿಗಳಲ್ಲೆ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದು ಅವರು ಹೇಳಿದರು.
ಬಿಜೆಪಿಯವರು ಶ್ರೀರಾಮನನ್ನು ಅವರ ಪಕ್ಷದ ರಾಮ ಎನ್ನುವಂತೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರನ್ನು ರಾಮನ ವಿರೋಧಿಗಳು ಎಂಬ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ನಾವು ರಾಮನ ವಿರೋಧಿಗಳಲ್ಲ. ವಾಲ್ಮೀಕಿ ಉಲ್ಲೇಖ ಮಾಡಿದ ರೀತಿ ನಮಗೆ ರಾಮ ಬೇಕು, ಬಿಜೆಪಿ ಅವರು ಬಿಂಬಿಸುವ ರೀತಿ ಅಲ್ಲ ಎಂದು ನಾಗೇಂದ್ರ ಹೇಳಿದರು.